ಕಾರ್ಗಿಲ್(ಲಡಾಖ್):ನಮ್ಮ ಸೇನೆಯು ಭಯೋತ್ಪಾದನೆ ಹತ್ತಿಕ್ಕಿದೆ. ಜನರ ರಕ್ಷಣೆಗಾಗಿ ಸದಾ ಹೋರಾಡುತ್ತ ನಂಬಿಕೆ ಮತ್ತು ಪ್ರೀತಿಯನ್ನು ಗಳಿಸಿದೆ. ಇಲ್ಲಿಯವರೆಗೆ ದೇಶವು ಆಚರಿಸಿದ ವಿಜಯದ ದೀಪಾವಳಿಯನ್ನು ನೆನಪಿಸಿಕೊಳ್ಳಿ ಎಂದು ಕಾರ್ಗಿಲ್‌ನಲ್ಲಿ ಸಶಸ್ತ್ರ ಪಡೆಗಳ ಸದಸ್ಯರೊಂದಿಗೆ ನಡೆದ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕಾರ್ಗಿಲ್ ಒಂದು ಮಹತ್ವದ ನೆಲ, ಈ ನೆಲಕ್ಕಾಗಿ ಪಾಕಿಸ್ತಾನ ಹೋರಾಡುತ್ತಲೇ ಬಂದಿದೆ. ಆದರೆ ಇಲ್ಲಿ ಧ್ವಜ ಹಾರಿಸಲು ಅವರಿಗೆ ಆಗಿಲ್ಲ. ದೀಪಾವಳಿ ಎಂದರೆ ಆತಂಕವನ್ನು ಕಳೆಯುವ ಹಬ್ಬ. ಕಾರ್ಗಿಲ್ನಲ್ಲೂ ಸೇನೆ ಇದನ್ನೇ ಮಾಡಿತ್ತು. ಈ ನೆಲದಲ್ಲಿ ಸೇನೆ ಆಚರಿಸಿದ ದೀಪಾವಳಿಯನ್ನು ಇಡೀ ದೇಶ ಎಂದೂ ಮರೆಯುವುದಿಲ್ಲ ಎಂದು ಹೇಳಿದರು.
ಉಕ್ರೇನ್ನಿಂದ ಭಾರತೀಯರ ರಕ್ಷಣೆ ಮಾಡಿದ್ದನ್ನು ನೆನೆದ ಮೋದಿ : ಉಕ್ರೇನ್-ರಷ್ಯಾ ಯುದ್ಧದ ಸಮಯದಲ್ಲಿ, ಅಲ್ಲಿ ಸಿಲುಕಿದ್ದ ನಮ್ಮ ನಾಗರಿಕರಿಗೆ ನಮ್ಮ ರಾಷ್ಟ್ರಧ್ವಜವು ಹೇಗೆ ರಕ್ಷಣೆಯಾಗಿತ್ತು ಎಂಬುದನ್ನು ನಾವು ನೋಡಿದ್ದೇವೆ. ಜಗತ್ತಿನಾದ್ಯಂತ ಭಾರತದ ಗೌರವ ಹೆಚ್ಚಿದೆ. ಭಾರತವು ತನ್ನ ಆಂತರಿಕ ಮತ್ತು ಬಾಹ್ಯ ಶತ್ರುಗಳ ವಿರುದ್ಧ ಯಶಸ್ವಿಯಾಗಿ ನಿಂತಿರುವುದರಿಂದ ಇದು ಸಾಧ್ಯವಾಗಿದೆ ಎಂದರು.
ಕಾರ್ಗಿಲ್ ವಿಜಯೋತ್ಸವದ ದೀಪಾವಳಿಯನ್ನು ಭಾರತದ ಜನ ಎಂದೂ ಮರೆಯಲ್ಲ ಸಶಸ್ತ್ರ ಪಡೆಗಳ ಧೈರ್ಯಕ್ಕೆ ತಲೆಬಾಗುತ್ತೇನೆ : ಸಶಸ್ತ್ರ ಪಡೆಗಳು ನಮ್ಮ ಗಡಿಯನ್ನು ರಕ್ಷಿಸುತ್ತಿರುವುದರಿಂದ ಭಾರತದ ಪ್ರತಿಯೊಬ್ಬ ನಾಗರಿಕನು ಶಾಂತಿಯುತವಾಗಿ ಮಲಗುತ್ತಾನೆ. ನಾನು ಭಾರತದ ಸಶಸ್ತ್ರ ಪಡೆಗಳ ಧೈರ್ಯಕ್ಕೆ ತಲೆಬಾಗುತ್ತೇನೆ. ನಿಮ್ಮ ತ್ಯಾಗ ಯಾವಾಗಲೂ ನಮ್ಮ ದೇಶವನ್ನು ಹೆಮ್ಮೆಪಡುವಂತೆ ಮಾಡಿದೆ. ನೀವೆಲ್ಲರೂ ಗಡಿಯಲ್ಲಿ ನಮ್ಮನ್ನು ರಕ್ಷಿಸುತ್ತಿರುವಂತೆಯೇ ನಾವು ದೇಶದೊಳಗೆ ಭಯೋತ್ಪಾದನೆ, ನಕ್ಸಲ್ವಾದ, ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇವೆ. ನಕ್ಸಲ್ವಾದವನ್ನು ಹಿಡಿತಕ್ಕೆ ತರಲಾಗಿದೆ ಎಂದು ಅದೇ ವೇಳೆ ಹೇಳಿದರು.
ಮೇಕ್ ಇನ್ ಇಂಡಿಯಾ ಶಸ್ತ್ರಾಸ್ತ್ರ : 400ಕ್ಕೂ ಹೆಚ್ಚು ರೀತಿಯ ರಕ್ಷಣಾ ಸಾಧನಗಳನ್ನು ಆಮದು ಮಾಡಿಕೊಳ್ಳುವುದಿಲ್ಲ. ಇವೆಲ್ಲವನ್ನು ಭಾರತದಲ್ಲೇ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಎಲ್ಲಾ 3 ಸಶಸ್ತ್ರ ಪಡೆಗಳ ನಿರ್ಧಾರವನ್ನು ನಾನು ಪ್ರಶಂಸಿಸುತ್ತೇನೆ. ನಮ್ಮ ಯೋಧರು ಮೇಕ್ ಇನ್ ಇಂಡಿಯಾ ಶಸ್ತ್ರಾಸ್ತ್ರಗಳೊಂದಿಗೆ ಹೋರಾಡಲು ಹೆಮ್ಮೆಪಡುತ್ತಾರೆ. ಮಾತ್ರವಲ್ಲದೆ, ಶತ್ರುವನ್ನು ಸೋಲಿಸಲು ಪಣತೊಡುತ್ತಿರುವುದು ಶ್ಲಾಘನೀಯ ಎಂದು ಪ್ರಧಾನಿ ಬಣ್ಣಿಸಿದರು.
ಶಾಂತಿಯನ್ನೇ ಭಯಸುತ್ತೇವೆ : ನಾವು ಎಂದಿಗೂ ಯುದ್ಧವನ್ನು ಮೊದಲ ಆಯ್ಕೆಯಾಗಿ ನೋಡಿಲ್ಲ. ಅದು ರಾಮಾಯಣದ ಶ್ರೀರಾಮನಾಗಲಿ ಅಥವಾ ಮಹಾಭಾರತದ ಕುರುಕ್ಷೇತ್ರದಲ್ಲಿ ಧರ್ಮರಾಯನಾಗಲಿ ಯುದ್ಧವನ್ನು ಮುಂದೂಡಲು ಕೊನೆಯವರೆಗೂ ಪ್ರಯತ್ನಿಸಿದ್ದರು. ನಾವು ಯುದ್ಧದ ವಿರುದ್ಧವಾಗಿದ್ದೇವೆ. ಆದರೆ ಶಕ್ತಿಯಿಲ್ಲದೆ ಶಾಂತಿ ಇರಲು ಸಾಧ್ಯವಿಲ್ಲ. ಯಾರಾದರೂ ನಮ್ಮನ್ನು ಕೆಟ್ಟ ಕಣ್ಣುಗಳಿಂದ ನೋಡಲು ಧೈರ್ಯ ಮಾಡಿದರೆ, ನಮ್ಮ ಸಶಸ್ತ್ರ ಪಡೆಗಳು ತಕ್ಕ ಉತ್ತರವನ್ನು ನೀಡುತ್ತವೆ ಎಂಬ ಎಚ್ಚರಿಕೆ ಸಂದೇಶವನ್ನು ವೈರಿ ರಾಷ್ಟ್ರಗಳಿಗೆ ಮೋದಿ ರವಾನಿಸಿದರು.
ಹೈಟೆಕ್ ಮೂಲಸೌಕರ್ಯ :ಈ ದೇಶದ ಸೈನಿಕರು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಲು ಅನುಕೂಲವಾಗುವಂತೆ ಗಡಿ ಪ್ರದೇಶಗಳಲ್ಲಿ ತಡೆರಹಿತ ಸಂಪರ್ಕದೊಂದಿಗೆ ಹೈಟೆಕ್ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಮಹಿಳಾ ಅಧಿಕಾರಿಗಳ ಸೇರ್ಪಡೆ ನಮ್ಮ ಶಕ್ತಿಯನ್ನು ದ್ವಿಗುಣಗೊಳಿಸಿದೆ ಎಂದರು.
ಸಂವಾದಕ್ಕೂ ಮುನ್ನ ಸಶಸ್ತ್ರ ಪಡೆಗಳ ಸದಸ್ಯರಿಗೆ ಸಿಹಿ ತಿನ್ನಿಸಿ ನೀವು ನನ್ನ ಕುಟುಂಬವಾಗಿದ್ದೀರಿ ಎಂದರು. ಕಾರ್ಗಿಲ್‌ನಲ್ಲಿ ನಡೆದ ದೀಪಾವಳಿ ಆಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೂಡಿ ಸಶಸ್ತ್ರ ಪಡೆಗಳ ಸದಸ್ಯರು ವಂದೇ ಮಾತರಂ' ಮತ್ತು 'ಭಾರತ್ ಮಾತಾ ಕಿ ಜೈ' ಘೋಷಣೆಗಳನ್ನು ಕೂಗಿದರು. ನಂತರ ಕಾರ್ಗಿಲ್‌ನಲ್ಲಿ ಸಶಸ್ತ್ರ ಪಡೆಗಳ ಸದಸ್ಯರೊಂದಿಗೆ 'ವಂದೇ ಮಾತರಂ' ಗಾಯನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು.
ಇದನ್ನೂ ಓದಿ :ಸೈನಿಕರೊಂದಿಗೆ ದೀಪಾವಳಿ ಆಚರಿಸಲು ಕಾರ್ಗಿಲ್ಗೆ ಮೋದಿ ಭೇಟಿ.. ಶುಭಾಶಯ ಕೋರಿದ ಪ್ರಧಾನಿ