ತೋಟಗೋಡಿಪುಟ್ (ಆಂಧ್ರ ಪ್ರದೇಶ): ಈ ಊರ ಜನರು ಮನೆ ಬಿಟ್ಟು ದೂರದೂರುಗಳಿಗೆ ವಲಸೆ ಹೋಗುತ್ತಿದ್ದಾರೆ. ಓಡಾಡಲೊಂದು ಸುಸಜ್ಜಿತ ರಸ್ತೆಯೂ ಇಲ್ಲ. ಯಾರಿಗಾದರೂ ಆರೋಗ್ಯದಲ್ಲಿ ಸಮಸ್ಯೆಯಾದರೆ ಆಸ್ಪತ್ರೆಗೆ ತೆರಳಲಾಗದೆ ನರಕಯಾತನೆ ಅನುಭವಿಸಲೇಬೇಕು. ಗರ್ಭಿಣಿಯರು, ವೃದ್ಧರು ಆಸ್ಪತ್ರೆಗೆ ಹೋಗಬೇಕಾದರೆ ಮೈಲಿಗಟ್ಟಲೆ ಕಾಲ್ನಡಿಗೆಯಲ್ಲೇ ಸಂಚರಿಸದೆ ವಿಧಿ ಇಲ್ಲ. ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದೆಕ್ಕೆಲ್ಲ ಕಾರಣ ರಸ್ತೆಯ ಕೊರತೆ. ಈ ಊರಿನ ಹೆಸರು ತೋಟಗೋಡಿಪುಟ್. ಇದೇ ಗ್ರಾಮದ ಮಹಿಳೆಯೊಬ್ಬಳು ತನ್ನೂರಿನ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದ್ದಾಳೆ. ಆಕೆಯ ಹೆಸರು ಡೋರಾ ಜಮ್ಮೆ.
ಈಕೆ ರಾಜಕಾರಣಿ ಅಲ್ಲ. ಶ್ರೀಮಂತ ಕುಟುಂಬದದಿಂದ ಬಂದಿಲ್ಲ. ಈ ಸಮಸ್ಯೆಗಳನ್ನೆಲ್ಲ ನಿತ್ಯ ಅನುಭವಿಸುತ್ತಿರುವ ಒಬ್ಬ ಸಾಮಾನ್ಯ ಆರೋಗ್ಯ ಕಾರ್ಯಕರ್ತೆ. ಕಳೆದ ನಾಲ್ಕು ವರ್ಷದಿಂದ ನಿರ್ವಹಿಸುತ್ತಿರುವ ಇದೇ ಕೆಲಸದಿಂದ ಪೈಸೆ ಪೈಸೆ ಲೆಕ್ಕ ಹಾಕಿ ಕೂಡಿಟ್ಟ ಹಣದಿಂದ ತನ್ನೂರಿಗೆ ರಸ್ತೆ ಮಾಡಿಸಿದ್ದಾರೆ.!
ತೋಟಗೋಡಿಪುಟ್ ಎಂಬುದು ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಜೋಳಪುಟ್ ಪಂಚಾಯತ್‌ನ ಬೆಟ್ಟದ ಮೇಲಿರುವ ಬುಡಕಟ್ಟು ಜನಾಂಗದವರು ವಾಸವಿರುವ ಗ್ರಾಮ. ಇಲ್ಲಿಗೆ ಹೋಗಲು ಸುಸಜ್ಜಿತ ರಸ್ತೆಯೇ ಇಲ್ಲ. ಕಲ್ಲು, ಮುಳ್ಳುಗಳನ್ನು ದಾಟಿ ಕಿರಿದಾದ ದಾರಿಯಲ್ಲಿ ಮೂರು ಕಿಲೋಮೀಟರ್ ನಡೆಯಬೇಕು. ಒಂದು ವೇಳೆ ವಾಪಸಾಗುವುದು ತಡವಾದರೆ, ಕತ್ತಲೆಯ ಭಯ. ಅನಿರೀಕ್ಷಿತ ಅವಘಡಗಳು ಸಂಭವಿಸಿದರೂ ಕೈಯಲ್ಲಿ ಎಷ್ಟೇ ಭಾರವಿದ್ದರೂ, ಬೆಟ್ಟ ಇಳಿದು ಬೆಟ್ಟ ಹತ್ತಬೇಕು. ಇದರಿಂದಾಗಿ ಗ್ರಾಮದ ಹಲವು ಕುಟುಂಬಗಳು ಬೇರೆ ಗ್ರಾಮಗಳಿಗೆ ವಲಸೆ ಹೋಗಿವೆ.
ರಸ್ತೆ ಸಮಸ್ಯೆ ಕುರಿತು ಅಧಿಕಾರಿಗಳಿಗೆ ಅದೆಷ್ಟೇ ಬಾರಿ ಮನವಿ ಮಾಡಿದರೂ ಅಧಿಕಾರಿಗಳಾಗಲಿ, ಮುಖಂಡರಾಗಲಿ ಇತ್ತ ತಿರುಗಿಯೂ ನೋಡಿಲ್ಲ. ವರ್ಷ ಕಳೆದರೂ ಪರಿಸ್ಥಿತಿ ಬದಲಾಗದ ಕಾರಣ ಗ್ರಾಮದಲ್ಲಿ ಇನ್ನೂ ಕೆಲವು ಕುಟುಂಬಗಳು ಉಳಿದುಕೊಂಡಿದ್ದು ಡೋರಾ ಜಮ್ಮೆ ರಸ್ತೆ ಮಾಡುವ ನಿರ್ಧಾರ ಕೈಗೊಂಡರು. ಆದರೆ ಈಕೆಗೆ ಇರಲೊಂದು ಒಳ್ಳೆಯ ಮನೆ ಇಲ್ಲ. ತಾನೂ ಒಂದು ಉತ್ತಮ ಮನೆ ನಿರ್ಮಿಸಿಕೊಳ್ಳಬೇಕು ಎಂದ ಆಸೆಯಿಂದ ಹಣ ಉಳಿಸಿಡುತ್ತಿದ್ದಳು. ಆದರೆ ತನಗಾಗಿ ಒಂದು ಮನೆ ಕಟ್ಟುವುದಕ್ಕಿಂತ ಊರಿಗಾಗಿ ಒಂದು ರಸ್ತೆಯ ಅಗತ್ಯವಿದೆ ಎಂದು ಅದೇ ಹಣದಿಂದ ರಸ್ತೆ ಸಮಸ್ಯೆಯನ್ನು ಪರಿಹರಿಸಲು ನಿರ್ಧರಿಸಿದಳು. ಗಂಡನ ನೆರವಿನಿಂದ 2 ಲಕ್ಷ ರೂ.ಗಳಲ್ಲಿ ಮೂರು ಕಿಲೋಮೀಟರ್ ಕಚ್ಚಾ ರಸ್ತೆ ನಿರ್ಮಿಸಿದ್ದಾಳೆ. ಸುಮಾರು ಎರಡು ಕಿಲೋಮೀಟರ್ ಈಗಾಗಲೇ ಪೂರ್ಣಗೊಂಡಿದೆ.
ಗರ್ಭಪಾತವೇ ಆಗಿತ್ತು..:''ನಮ್ಮ ಗ್ರಾಮ ಅರಕು ಪಕ್ಕದಲ್ಲಿದೆ. ನಾನು ಚಿಕ್ಕವಳಿದ್ದಾಗ ತಂದೆ ತೀರಿಕೊಂಡರು. ತಾಯಿ ಇಬ್ಬರು ಅಣ್ಣಂದಿರನ್ನು ಮತ್ತು ನನ್ನನ್ನು ಸಾಕಲು ಕಷ್ಟಪಟ್ಟರು. ನಾನು 2017 ರಲ್ಲಿ ಮದುವೆಯಾಗಿ ಗಂಡನ ಊರಾದ ತೋಟಗೋಡಿಪಟ್‌ಗೆ ಸ್ಥಳಾಂತರಗೊಂಡೆ. ಇಬ್ಬರು ಗಂಡು ಮಕ್ಕಳಿದ್ದಾರೆ. ಎಲ್ಲರೂ ವಲಸೆ ಹೋಗಿದ್ದರಿಂದ 9 ಕುಟುಂಬಗಳು ಮಾತ್ರ ಗ್ರಾಮದಲ್ಲಿ ಉಳಿದಿವೆ. ಎಲ್ಲರೂ ಹಾಗೆಯೇ ಊರು ಬಿಟ್ಟು ಹೋದರೆ ಬೇಸರವಾಗುತ್ತದೆ.’’
''ನಾನು ಆರೋಗ್ಯ ಕಾರ್ಯಕರ್ತೆ. ತಿಂಗಳಿಗೆ 4 ಸಾವಿರ ರೂ ಸಂಬಳ ಪಡೆಯುತ್ತೇನೆ. ಕೆಲ ದಿನಗಳ ಹಿಂದೆ ಗರ್ಭಿಣಿಯೊಬ್ಬರಿಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ಪುರುಷರೇ ಇರಲಿಲ್ಲ. ವಿಷಯ ಗೊತ್ತಾಗಿ ಕೆಲಸಕ್ಕೆಂದು ಹೋದವರು ಬೆಟ್ಟದಿಂದ ಇಳಿದು ಬಂದರು. ಆ ಮಹಿಳೆ ಸ್ಥಿತಿ ಹದಗೆಟ್ಟು, ಆಸ್ಪತ್ರೆಗೆ ಸಾಗಿಸಲಾಗದೆ ಗರ್ಭಪಾತವಾಯಿತು. ಬಹುತೇಕ ಸಾಯುವ ಸ್ಥಿತಿಗೆ ತಲುಪಿದ್ದರು. ಎಎನ್‌ಎಂ ಮತ್ತು ವೈದ್ಯರು ಗ್ರಾಮಕ್ಕೆ ಧಾವಿಸಿ ಚಿಕಿತ್ಸೆ ನೀಡಿದ ಕಾರಣ ಆಕೆ ಬದುಕುಳಿದಿದ್ದಾಳೆ. ಕಾಯಿಲೆ ಬಿದ್ದರೆ ಹಳ್ಳಿಯ ಮುದುಕರ ಸ್ಥಿತಿ ಕೂಡ ಇದೇ ಆಗಿರುತ್ತದೆ. ಕುಡಿಯುವ ನೀರು ಬೇಕಾದರೂ ದೂರ ಹೋಗಿ ತೆಗೆದುಕೊಂಡು ಬರಬೇಕು. ಆ ಸಮಸ್ಯೆ ಕೂಡ ಇತ್ತು. ಇದನ್ನೆಲ್ಲಾ ನೋಡಿದ ನಂತರ ನನಗೆ ಮಾತ್ರ ಉಪಯುಕ್ತವಾದ ಮನೆಗಿಂತ ಎಲ್ಲರಿಗೂ ಸಹಾಯ ಮಾಡುವ ರಸ್ತೆ ಮುಖ್ಯ ಎಂದು ಅನ್ನಿತು'' ಎನ್ನುತ್ತಾರೆ ಡೋರಾ ಜಮ್ಮೆ.
ಈಗ ಊರಿಗೆ ವಾಹನಗಳು ಬರುತ್ತವೆ:ರಸ್ತೆಯಲ್ಲಿ ಆಟೋ ಅಲ್ಲ, ಬೈಕ್ ಕೂಡ ಸಂಚರಿಸಲು ಸಾಧ್ಯವಿರಲಿಲ್ಲ. ಗ್ರಾಮದ ಮನೆಯವರ ಸಂಬಂಧಿಕರು, ನೆಂಟರು ಯಾರೂ ಬರುತ್ತಿರಲಿಲ್ಲ. ಇದನ್ನೆಲ್ಲ ನೋಡುತ್ತಿದ್ದ ಜಮ್ಮೆ ಅವರಿಗೂ ಈ ಹಿಂದೆ ಊರು ಬಿಟ್ಟು ಹೋಗಬೇಕು ಅನ್ನಿಸಿತ್ತಂತೆ. ಆದರೆ ಎಲ್ಲರೂ ಹೀಗೆ ಯೋಚಿಸಿದರೆ ಹಳ್ಳಿಯೇ ಕಣ್ಮರೆಯಾಗುತ್ತದೆ. ಜೆಸಿಬಿ ಬಂದು ಕೆಲಸ ಆರಂಭಿಸುವವರೆಗೂ ಆಕೆಯ ನಿರ್ಧಾರದ ಬಗ್ಗೆ ಗ್ರಾಮಸ್ಥರಿಗೂ ಗೊತ್ತಿರಲಿಲ್ಲ. ದಿನವೊಂದಕ್ಕೆ ಇತರೆ ಖರ್ಚು ಸೇರಿ 16 ಸಾವಿರ ರೂಪಾಯಿ ನೀಡುವುದಾಗಿ ಜೆಸಿಬಿಯವರಿಗೆ ಮನವೊಲಿಸಿ, ಕಾರ್ಯ ಪ್ರಾರಂಭಿಸಿದ್ದಳು.
"ರಸ್ತೆ ಸೌಲಭ್ಯ ಬಂದರೆ ಕುಡಿಯಲು ಶುದ್ಧ ನೀರು, ಬೋರ್ವೆಲ್ ಬರುತ್ತವೆ, ವಾಹನಗಳು ಮತ್ತು ಆಂಬ್ಯುಲೆನ್ಸ್‌ಗಳು ಬರುತ್ತವೆ. ನನ್ನ ವಿಚಾರವನ್ನು ಕೇಳಿ ಇತರ ಕೆಲವು ಗ್ರಾಮಸ್ಥರು ಕೂಡ ಸಹಾಯಕ್ಕೆ ಬರುತ್ತಿದ್ದಾರೆ. ನಾನು ಉಳಿಸಿದ ಹಣ ಬಹುತೇಕ ಖಾಲಿಯಾಗಿದೆ. ಏನೇ ಆದರೂ ನಾನು ರಸ್ತೆ ಕೆಲಸವನ್ನು ಪೂರ್ತಿ ಮಾಡುತ್ತೇನೆ ಎನ್ನುವ ಬಲವಾದ ನಂಬಿಕೆ ನನಗಿದೆ. ಬೇಕಾದರೆ ಉಳಿದ ಹಣಕ್ಕಾಗಿ ಕೃಷಿ ಮಾಡುತ್ತೇನೆ. ಕೃಷಿಯಿಂದ ಬಂದ ಹಣದಿಂದ ರಸ್ತೆಯನ್ನು ಪೂರ್ತಿ ಮಾಡುತ್ತೇನೆ.'' ಎನ್ನುತ್ತಾರೆ ಡೋರಾ ಜಮ್ಮೆ.
ಇದನ್ನೂ ಓದಿ:ಒಂದೇ ಕಾಲಲ್ಲಿ ಕಿಲೋಮೀಟರ್ ನಡೆದು ಶಾಲೆಗೆ ಬರುವ ವಿದ್ಯಾರ್ಥಿನಿ.. ದಿವ್ಯಾಂಗ ಸೀಮಾ ಎಲ್ಲರಿಗೂ ಸ್ಫೂರ್ತಿ..