ಮುಂಬೈ: ಮುಂದಿನ ವರ್ಷದ ಲೋಕಸಭೆ ಚುನಾವಣೆಗೂ ಮುನ್ನ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಹಾಗೂ ಬಲಪಡಿಸುವ ಕುರಿತಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ಕುಮಾರ್ ಡಿಸಿಎಂ ತೇಜಸ್ವಿ ಯಾದವ್ರೊಂದಿಗೆ ಗುರುವಾರ ಮುಂಬೈನಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಎನ್‌ಸಿಪಿ ರಾಷ್ಟ್ರೀಯ ನಾಯಕ ಶರದ್ ಪವಾರ್ ಅವರ ದಕ್ಷಿಣ ಮುಂಬೈನ ನಿವಾಸದಲ್ಲಿ ಜಂಟಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಆಡಳಿತ ದೇಶದ ಹಿತಾಸಕ್ತಿಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ. ಪ್ರಸ್ತುತ ವಿರೋಧ ಪಕ್ಷಗಳ ಮೈತ್ರಿಕೂಟ ಒಗ್ಗೂಡಿದರೆ 2024ರ ಸಾರ್ವತ್ರಿಕ ಚುನಾವಣೆಯನ್ನು ಎದುರಿಸುವುದು ಸುಲಭವಾಗಲಿದೆ ಎಂದು ಹೇಳಿದರು.
ಪ್ರತಿಪಕ್ಷಗಳ ಮೈತ್ರಿಕೂಟದ ನಾಯಕರಾಗಿ ಪವಾರ್ ಆಗುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರ್, ಅದಕ್ಕಿಂತ ಸಂತೋಷಕರ ಸಂಗತಿ ಮತ್ತೊಂದು ಇಲ್ಲ. ಅವರು ತಮ್ಮ ಪಕ್ಷಕ್ಕಾಗಿ ಮಾತ್ರ ಅಲ್ಲ, ಇಡೀ ದೇಶಕ್ಕಾಗಿ ಹೆಚ್ಚು ಉತ್ಸಾಹದಿಂದ ಕೆಲಸ ಮಾಡಬೇಕು ಎಂದು ನಾನು ಅವರಿಗೆ ಹೇಳಿದ್ದೇನೆ. ವಿರೋಧ ಪಕ್ಷಗಳೆಲ್ಲ ಒಗ್ಗೂಡಿದರೆ, ಅದು ದೇಶದ ಹಿತದೃಷ್ಟಿಯಿಂದಲೂ ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಎನ್‌ಸಿಪಿ ರಾಷ್ಟ್ರೀಯ ನಾಯಕ ಶರದ್ ಪವಾರ್ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಪ್ರತಿಪಕ್ಷಗಳೆಲ್ಲ ಒಂದುಗೂಡುವುದು ಅಗತ್ಯವಿದೆ. ನಾವೆಲ್ಲರೂ ಒಗ್ಗೂಡಿದರೆ, ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ಬೆಂಬಲ ಸಿಗಲಿದೆ. ಮೈತ್ರಿಕೂಟದ ವಿರೋಧ ಪಕ್ಷದ ನಾಯಕ ಯಾರಾಗಬೇಕು ನಂತರ ತೀರ್ಮಾನಿಸಲಾಗುವುದು. ಸದ್ಯ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದು ಹೇಳಿದರು.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಲಿದೆ ಎಂಬ ಮಾಹಿತಿಯನ್ನು ಎನ್‌ಸಿಪಿ ಮುಖ್ಯಸ್ಥರು ಹೇಳಿದ್ದು, ಅಲ್ಲಿನ ಜನರು ಬಿಜೆಪಿಯನ್ನು ಕಿತ್ತೊಗೆದು ಜಾತ್ಯತೀತ ಸರ್ಕಾರವನ್ನು ಆಯ್ಕೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.