ನವದೆಹಲಿ : ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಇಂದು ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸಲು ಪ್ರತಿಪಕ್ಷಗಳು ನಿರ್ಧರಿಸಿವೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ. ಜುಲೈ 20ರಂದು ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾದಾಗಿನಿಂದ ಪ್ರತಿಪಕ್ಷ ಸದಸ್ಯರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಣಿಪುರ ಹಿಂಸಾಚಾರ ವಿಚಾರವಾಗಿ ಪ್ರಧಾನಿ ಮೋದಿ ಹೇಳಿಕೆಗೆ ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿವೆ. ಇದರಿಂದಾಗಿ ಉಭಯ ಸದನಗಳ ಕಲಾಪಗಳನ್ನೂ ಪದೇ ಪದೇ ಮುಂದೂಡಲಾಗುತ್ತಿದೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಧೀರ್ ರಂಜನ್ ಚೌಧರಿ, "ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲಿವೆ. ಮಂಗಳವಾರ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಅವಿಶ್ವಾಸ ಗೊತ್ತುವಳಿ ಮಂಡನೆಗೆ ಮುಂದಾಗದೆ ನಮಗೆ ಬೇರೆ ದಾರಿ ಇಲ್ಲ. ಏಕೆಂದರೆ, ಮಣಿಪುರ ಕುರಿತು ಪ್ರಧಾನಿ ಜೊತೆ ವಿಸ್ತೃತ ಚರ್ಚೆ ನಡೆಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಳ್ಳುತ್ತಿಲ್ಲ. ಅವರು ಸಂಸತ್ತಿನಲ್ಲಿ ನಮ್ಮ ನಾಯಕರಾಗಿರುವುದರಿಂದ ಮಣಿಪುರ ಹಿಂಸಾಚಾರದ ಬಗ್ಗೆ ಹೇಳಿಕೆ ನೀಡಬೇಕು. ಆದರೆ, ಪ್ರತಿಪಕ್ಷಗಳ ಬೇಡಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ತಿರಸ್ಕರಿಸುತ್ತಿದ್ದಾರೆ" ಎಂದು ಹೇಳಿದರು.
ಇದನ್ನೂ ಓದಿ :Parliament session : ಅಧಿವೇಶನದಲ್ಲಿ ಮಣಿಪುರ ವಿಡಿಯೋ ಗದ್ದಲ.. ಮಧ್ಯಾಹ್ನ 2 ಗಂಟೆಗೆ ಕಲಾಪ ಮುಂಡೂಡಿಕೆ
ಮಣಿಪುರದ ಪರಿಸ್ಥಿತಿಯ ಕುರಿತು ವಿಸ್ತೃತ ಚರ್ಚೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಹೇಳಿಕೆ ನೀಡುವಂತೆ ಪ್ರತಿಪಕ್ಷಗಳು ಒತ್ತಾಯಿಸುತ್ತಿರುವುದರಿಂದ ಲೋಕಸಭೆ ಮತ್ತು ರಾಜ್ಯಸಭೆಗಳು ಮುಂದೂಡಲ್ಪಡುತ್ತಿವೆ. ಮಣಿಪುರ ಹಿಂಸಾಚಾರದ ಬಗ್ಗೆ ಚರ್ಚೆಗೆ ಸಿದ್ಧ ಎಂದು ಸರ್ಕಾರ ಹೇಳಿದೆ. ಆದರೂ ವಿರೋಧ ಪಕ್ಷಗಳು ಮತದಾನದ ನಿಯಮದ ಅಡಿ ಚರ್ಚೆಗೆ ಒತ್ತಾಯಿಸುತ್ತಿವೆ. ಈ ಕುರಿತಾದ ಚರ್ಚೆಗೆ ಕೇಂದ್ರ ಗೃಹ ಸಚಿವರೇ ಉತ್ತರ ನೀಡಲಿದ್ದಾರೆ ಎಂದು ಸರ್ಕಾರ ತಿಳಿಸಿದೆ.