ನವದೆಹಲಿ:ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಪಂಜಾಬ್ ಸಿಎಂ ಭಗವಂತ್ ಮಾನ್, ದೆಹಲಿ ಸರ್ಕಾರದ ಸಚಿವರು ಕೇಜ್ರಿವಾಲ್ ಅವರೊಂದಿಗೆ ಸಿಬಿಐ ಕಚೇರಿಗೆ ಬರಲಿದ್ದಾರೆ.
ಇದೇ ವೇಳೆ ಆಪ್ ತನ್ನ ನಾಯಕನ ವಿಚಾರಣೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ಮುಂದಾಗಿದೆ. ಈಗಾಗಲೇ ದೆಹಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರು ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಇವರ ವಿರುದ್ಧ ಸಿಬಿಐ ಮತ್ತು ಇಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.
ಇದೇ ವಿಚಾರವಾಗಿ ನಿನ್ನೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಅರವಿಂದ್ ಕೇಜ್ರಿವಾಲ್ ಅವರು, ನೀವೊಂದು ವೇಳೆ ನನ್ನನ್ನೇ ಭ್ರಷ್ಟ ಎಂದರೆ ಈ ಜಗತ್ತಿನಲ್ಲಿ ಯಾರೂ ಪ್ರಾಮಾಣಿಕರು ಇರಲು ಸಾಧ್ಯವಿಲ್ಲ. ನಾನು ಈ ಹಿಂದೆ ತೆರಿಗೆ ಇಲಾಖೆ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದೆ. ಹಣ ಮಾಡಬೇಕು ಎಂದುಕೊಂಡಿದ್ದರೆ, ಕೋಟಿಗಟ್ಟಲೇ ಗಳಿಸುತ್ತಿದ್ದೆ. ರಾಜಕೀಯಕ್ಕೆ ಬಂದಿದ್ದು, ಬಡವರಿಗೆ ನೆರವಾಗಲೆಂದೇ ಹೊರತು ಹಣ ಮಾಡಲು ಅಲ್ಲ ಎಂದು ಹೇಳಿದರು.
ಸಿಬಿಐ ಅಧಿಕಾರಿಗಳು ನನ್ನನ್ನು ವಿಚಾರಣೆಗೆ ಕರೆದಿದ್ದಾರೆ. ಖಂಡಿತವಾಗಿಯೂ ಹೋಗುತ್ತೇನೆ. ಅರವಿಂದ್ ಕೇಜ್ರಿವಾಲ್ ಭ್ರಷ್ಟರಲ್ಲ ಎಂಬುದನ್ನು ಅಲ್ಲಿಯೇ ತೋರಿಸುತ್ತೇನೆ. ಸಿಬಿಐಗೆ ನನ್ನನ್ನು ಬಂಧಿಸಲು ಬಿಜೆಪಿ ಆದೇಶಿಸಿದೆ ಎಂದು ಇದೇ ವೇಳೆ ಗಂಭೀರ ಆರೋಪ ಮಾಡಿದ್ದಾರೆ.
ತನಿಖಾ ದಳ ಸಂಸ್ಥೆಗಳ ವಿರುದ್ಧ ಕೇಸ್- ಕೇಜ್ರಿವಾಲ್:ವಿಪಕ್ಷ ನಾಯಕರ ವಿರುದ್ಧ ಸುಳ್ಳು ಕೇಸ್ಗಳನ್ನು ದಾಖಲಿಸಿ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡುತ್ತಿರುವ ತನಿಖಾ ಸಂಸ್ಥೆಗಳಾದ ಸಿಬಿಐ, ಇಡಿ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ತಾನು ವಿಚಾರಣೆ ನಡೆಸುವ ಕೇಸ್ಗಳಲ್ಲಿ ಕೋರ್ಟ್ಗೆ ತಪ್ಪು ಮಾಹಿತಿ ನೀಡುತ್ತಿದೆ. ಇದೇ ಪ್ರಕರಣದಲ್ಲಿ ಬಂಧನವಾಗಿರುವ ಮನೀಶ್ ಸಿಸೋಡಿಯಾ 14 ಮೊಬೈಲ್ಗಳನ್ನು ಬಳಸಿದ್ದರು ಎಂದು ಹೇಳಿದೆ. ಅದರಲ್ಲಿ ನಾಲ್ಕನ್ನು ಮಾತ್ರ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಉಳಿದ ಮೊಬೈಲ್ಗಳನ್ನು ಕಾರ್ಯಕರ್ತರು ಬಳಸುತ್ತಿದ್ದಾರೆ ಎಂದು ಹೇಳಿದೆ. ಹಾಗಾದರೆ, ನ್ಯಾಯಾಲಯಕ್ಕೆ ನೀಡಿದ ಮಾಹಿತಿ ಸುಳ್ಳಾಗಿದೆ. 15 ಮೊಬೈಲ್ಗಳ ಬಗ್ಗೆ ಪ್ರಸ್ತಾಪಿಸಿದ್ದೇಕೆ. ನಾನು ಭ್ರಷ್ಟಾಚಾರದ ವಿರುದ್ಧ ಮಾತನಾಡಿದ ದಿನದಿಂದಲೂ ಸಿಬಿಐನಿಂದ ನಾನು ಸತತವಾಗಿ ಸಮನ್ಸ್ ಪಡೆಯುತ್ತಿದ್ದೇನೆ. 75 ವರ್ಷಗಳಲ್ಲಿ ಆಪ್ನಷ್ಟು ತೊಂದರೆ ಅನುಭವಿಸಿದ ರಾಜಕೀಯ ಪಕ್ಷ ಇನ್ನೊಂದಿಲ್ಲ. ಜನರಿಗೆ ಇರುವ ಏಕೈಕ ಪರ್ಯಾಯ ಆಯ್ಕೆ ಆಪ್ ಮಾತ್ರ. ಹೀಗಾಗಿ ನಮ್ಮನ್ನೇ ಗುಡಿಯಾಗಿಸಿಕೊಂಡು ದಾಳಿ ಮಾಡಲಾಗುತ್ತಿದೆ ಎಂದು ಸಿಎಂ ಕೇಜ್ರಿವಾಲ್ ಹೇಳಿದರು.
ಅಬಕಾರಿ ನೀತಿ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದ ತನಿಖೆಯಲ್ಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರನ್ನು ಇಡಿ ಮತ್ತು ಸಿಬಿಐ ಬಂಧಿಸಿದೆ. ಫೆಬ್ರವರಿ 26 ರಂದು ಸಿಬಿಐ ಸಿಸೋಡಿಯಾ ಅವರನ್ನು ಬಂಧಿಸಿದೆ. ಮಾರ್ಚ್ 9 ರಂದು ಇಡಿ ತಿಹಾರ್ ಜೈಲಿನಲ್ಲಿ ಹಲವು ಗಂಟೆಗಳ ವಿಚಾರಣೆಯ ನಂತರ ತನ್ನ ವಶಕ್ಕೆ ಪಡೆದಿದೆ.
ದಿಲ್ಲಿ ಅಬಕಾರಿ ನೀತಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಇಡಿ ಮತ್ತು ಸಿಬಿಐ ಆರೋಪಿಸಿವೆ. ಪರವಾನಗಿದಾರರಿಗೆ ಅನಪೇಕ್ಷಿತ ಅನುಕೂಲಗಳನ್ನು ವಿಸ್ತರಿಸಲಾಗಿದೆ. ಪರವಾನಗಿ ಶುಲ್ಕವನ್ನು ಮನ್ನಾ ಅಥವಾ ಕಡಿಮೆ ಮಾಡಲಾಗಿದೆ ಮತ್ತು ಸಕ್ಷಮ ಪ್ರಾಧಿಕಾರದ ಅನುಮೋದನೆಯಿಲ್ಲದೆ ಎಲ್ -1 ಪರವಾನಗಿಯನ್ನು ವಿಸ್ತರಿಸಲಾಗಿದೆ. ಫಲಾನುಭವಿಗಳು ಅಕ್ರಮ ಲಾಭವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಓದಿ:ಇಂದು, ನಾಳೆ ರಾಜ್ಯದಲ್ಲಿ ರಾಹುಲ್ ಹವಾ.. ಕಾಂಗ್ರೆಸ್ ಪ್ರಚಾರಕ್ಕೆ ಹೊಸ ಚೈತನ್ಯ