ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನದಿಂದಲೇ ಪ್ರತಿಪಕ್ಷಗಳು ಮಣಿಪುರ ಜನಾಂಗೀಯ ಹಿಂಸಾಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಒತ್ತಾಯಿಸುತ್ತಲೇ ಬಂದಿವೆ. ಆದರೆ ಇದೀಗ ಅಧಿವೇಶನದಿಂದ ಹೊರಬಂದು, ಪ್ರಧಾನಿ ಹೇಳಿಕೆಗೆ ಆಗ್ರಹಿಸಿ ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆಯ ಪ್ರತಿಪಕ್ಷದ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ 'ಇಂಡಿಯಾ' ಮೈತ್ರಿ ಕೂಟದ ನಾಯಕರು ಸೇರಿ ಪ್ರತಿಭಟಿಸಿದ್ದಾರೆ.
'ಮಣಿಪುರ ಉಳಿಸಿ' ಫಲಕಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕರು ಮಣಿಪುರ ಜನಾಂಗೀಯ ಹಿಂಸಾಚಾರದ ಬಗ್ಗೆ ಪ್ರಧಾನಿ ಹೇಳಿಕೆ ನೀಡಬೇಕು ಎಂದರು. ಸಂಸತ್ತಿನೊಳಗೆ ಅಶಿಸ್ತು ವರ್ತನೆಗಾಗಿ ಎಎಪಿ ಸಂಸದ ಸಂಜಯ್ ಸಿಂಗ್ ಅವರನ್ನು ಅಧಿವೇಶನ ಮುಗಿಯುವವರೆಗೆ ಅಮಾನತುಗೊಳಿಸಿದ ನಂತರ, ಮೈತ್ರಿ ಪ್ರತಿಪಕ್ಷಗಳ ಸಂಸದರು ನಿನ್ನೆ (ಸೋಮವಾರ) ರಾಜ್ಯಸಭೆಯಿಂದ ಹೊರಬಂದು ಸಂಸತ್ ಭವನದ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಬಳಿ ರಾತ್ರಿಯಿಡೀ ಧರಣಿ ಕುಳಿತಿದ್ದರು.
ಇಂದು (ಮಂಗಳವಾರ) ಬೆಳಗ್ಗೆ 10.45 ಯವರೆಗೆ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದ ಪ್ರತಿಪಕ್ಷಗಳ ನಾಯಕರು, ಮುಂಗಾರು ಅಧಿವೇಶನದಲ್ಲಿ ಮಣಿಪುರ ಜನಾಂಗೀಯ ಹಿಂಸಾಚಾರ ವಿಷಯದ ಬಗ್ಗೆ ಕೇಂದ್ರೀಕರಿಸುವುದು ತಮ್ಮ ಗುರಿ ಎನ್ನುವುದನ್ನು ನಿರ್ಧರಿಸಿದರು. ವಿಸ್ತೃತ ಚರ್ಚೆಯ ನಂತರ ಮಣಿಪುರದ ಕುರಿತು ಪ್ರಧಾನಿ ಹೇಳಿಕೆಗೆ ಒತ್ತಾಯಿಸಿದ ಪ್ರತಿಪಕ್ಷಗಳು ಬೇಡಿಕೆಗಳನ್ನು ಈಡೇರಿಸುವವರೆಗೆ ತಮ್ಮ ಪ್ರತಿಭಟನೆ ಮುಂದುವರೆಸುವುದಾಗಿ ಹೇಳಿವೆ.