ಪಾಟ್ನಾ (ಬಿಹಾರ): ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು 2024 ರ ಲೋಕಸಭೆ ಚುನಾವಣೆಗೆ ರಾಹುಲ್ ಗಾಂಧಿ ಅವರನ್ನು ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದ ಬಳಿಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. 'ನನಗೆ ಪ್ರಧಾನಿಯಾಗುವ ಯಾವುದೇ ಆಸೆಯೂ ಇಲ್ಲ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾದರೆ ಯಾವುದೇ ತೊಂದರೆಯೂ ಇಲ್ಲ ಎಂದು ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ಅವರು, 'ನನಗೆ ಭಾರತದ ಪ್ರಧಾನಿಯಾಗುವ ಆಸೆ ಇಲ್ಲ. ರಾಹುಲ್ ಗಾಂಧಿ ದೇಶದ ಪ್ರಧಾನಿಯಾದರೆ ತಪ್ಪೇನು?, ಎಲ್ಲಾ ಪಕ್ಷಗಳ ಜೊತೆ ಮಾತನಾಡಿ ಪ್ರತಿಪಕ್ಷದ ಪಾಳಯಕ್ಕೆ ಉತ್ತಮ ನಾಯಕನನ್ನು ಕರೆತರಲು ಕಾಯುತ್ತಿದ್ದೇವೆ ಅಷ್ಟೇ. ಮಿತ್ರ ಪಕ್ಷವಾದ ಕಾಂಗ್ರೆಸ್‌ನೊಂದಿಗೆ ನಮಗೆ ಯಾವುದೇ ಸಮಸ್ಯೆ ಆಗಲ್ಲ' ಎಂದರು.
'ನಾನು ದೇಶವು ಅಭಿವೃದ್ಧಿಯ ಪಥದಲ್ಲಿ ಓಡುವುದನ್ನು ಮಾತ್ರ ನೋಡಲು ಬಯಸುತ್ತೇನೆ. ಕೆಲ ಜನರು ನಾನು ಪ್ರಧಾನಿ ರೇಸ್‌ನಲ್ಲಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ದೇಶದಲ್ಲಿ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ನಡೆಸಲಾಗುತ್ತಿದೆ. ಬಿಜೆಪಿಯನ್ನು ವಿರೋಧಿಸುವ ಪಕ್ಷಗಳನ್ನು ಒಗ್ಗೂಡಿಸುವುದೇ ನಮ್ಮ ಬದ್ಧತೆ. ನಾವು (ಪ್ರತಿಪಕ್ಷಗಳು) ಮೊದಲು ಒಟ್ಟಿಗೆ ಕುಳಿತು ಚರ್ಚಿಸಿ ನಂತರ ಪಿಎಂ ಅಭ್ಯರ್ಥಿಯ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು. ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗುವುದಕ್ಕೆ ನನ್ನ ಅಭ್ಯಂತರವಿಲ್ಲ' ಎಂದು ಮುಖ್ಯಮಂತ್ರಿ ಪುನರುಚ್ಚರಿಸಿದರು.
ಇದನ್ನೂ ಓದಿ:ನಾವೆಲ್ಲೂ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿಲ್ಲ: ಮಾಜಿ ಶಾಸಕ ಅನಿಲ್ ಲಾಡ್