ನವದೆಹಲಿ: ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭವನ್ನು ಕಾಂಗ್ರೆಸ್ ಸೇರಿದಂತೆ 19 ಪ್ರತಿಪಕ್ಷಗಳು ಬಹಿಷ್ಕರಿಸಲು ನಿರ್ಧರಿಸಿವೆ. ಈ ಸಂಬಂಧ ಇಂದು (ಬುಧವಾರ) ಜಂಟಿಯಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿವೆ. ''ಪ್ರಧಾನಿ ಮೋದಿ ಅವರ ಪ್ರಜಾಪ್ರಭುತ್ವ ವಿರೋಧಿ ನಡೆ ಹೊಸದೇನಲ್ಲ. ದೇಶದ ಜನತೆಯ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ ಪ್ರತಿಪಕ್ಷದ ಸದಸ್ಯರ ಅನರ್ಹ, ಅಮಾನತುಗೊಳಿಸುವಿಕೆಯನ್ನು ಅವರು ಮಾಡಿದ್ದಾರೆ. ವಿಪಕ್ಷಗಳ ಧ್ವನಿಯನ್ನು ಅಡಗಿಸುವ ಕೆಲಸ ಮಾಡಿದ್ದಾರೆ. ಈ ಮೂಲಕ ತಮ್ಮ ಪಟ್ಟು ಬಿಡದ ನಿಲುವುಗಳಿಂದ ಮೋದಿ ಸಂಸತ್ತನ್ನೇ ಬರಿದು ಮಾಡಿದ್ದಾರೆ'' ಎಂದು ಪ್ರತಿಪಕ್ಷಗಳು ಖಾರವಾಗಿ ಟೀಕಿಸಿವೆ.
ಪ್ರತಿಪಕ್ಷಗಳ ಆಕ್ಷೇಪವೇನು?: ಹೊಸ ಸಂಸತ್ ಭವನವಾದ ಸೆಂಟ್ರಲ್ ವಿಸ್ಟಾ ಲೋಕಾರ್ಪಣೆ ಕಾರ್ಯಕ್ರಮವನ್ನು ಮೇ 28 ರಂದು ನಿಗದಿ ಮಾಡಲಾಗಿದೆ. ರಾಷ್ಟ್ರಪತಿ ಬದಲಿಗೆ ಪ್ರಧಾನಿ ಅವರು ಭವನ ಉದ್ಘಾಟನೆ ಮಾಡುತ್ತಿರುವುದಕ್ಕೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಇದೇ ವಿಚಾರವಾಗಿ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಜಟಾಪಟಿ ನಡೆಯುತ್ತಿದೆ. ಇದರ ನಡುವೆ ಸಮಾರಂಭವನ್ನೇ ಬಹಿಷ್ಕರಿಸುವುದಾಗಿ ವಿಪಕ್ಷಗಳು ಪ್ರಕಟಿಸಿವೆ.
''ಆಡಳಿತಾರೂಢ ಪಕ್ಷದ ಸಂಸದರೇ ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ. ಮೂರು ಕೃಷಿ ಕಾನೂನುಗಳು ಸೇರಿದಂತೆ ಅನೇಕ ವಿವಾದಾತ್ಮಕ ಶಾಸನಗಳನ್ನು ಯಾವುದೇ ಚರ್ಚೆಯಿಲ್ಲದೇ ಅಂಗೀಕರಿಸಲಾಗಿದೆ. ಸಂಸದೀಯ ಸಮಿತಿಗಳನ್ನು ಪ್ರಾಯೋಗಿಕವಾಗಿ ನಿಷ್ಕ್ರಿಯಗೊಳಿಸಲಾಗಿದೆ. ಹೊಸ ಸಂಸತ್ತಿನ ಕಟ್ಟಡವನ್ನು ಈ ಶತಮಾನ ಕಂಡ ಸಾಂಕ್ರಾಮಿಕದ ಸಮಯದಲ್ಲಿ ದೇಶದ ಜನತೆ ಅಥವಾ ಸಂಸದರೊಂದಿಗೆ ಯಾವುದೇ ಸಮಾಲೋಚನೆ ನಡೆಸದೇ ಹೆಚ್ಚಿನ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದನ್ನು ಯಾರಿಗಾಗಿ ನಿರ್ಮಿಸಲಾಗಿದೆ'' ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ.
"ಪ್ರಜಾಪ್ರಭುತ್ವದ ಆತ್ಮವನ್ನೇ ಸಂಸತ್ತಿನಿಂದ ಹೊರಹಾಕಲಾಗಿದೆ. ಇಂತಹ ಸಮಯದಲ್ಲಿ ನಾವು ಹೊಸ ಕಟ್ಟಡದಲ್ಲಿ ಯಾವುದೇ ಮೌಲ್ಯವನ್ನು ಕಾಣುವುದಿಲ್ಲ. ಈ ಕಾರಣಕ್ಕೆ ಸಂಸತ್ ಕಟ್ಟಡದ ಉದ್ಘಾಟನೆಯನ್ನು ಬಹಿಷ್ಕರಿಸುತ್ತೇವೆ" ಎಂದು ವಿಪಕ್ಷಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿವೆ. ಅಲ್ಲದೇ, ಈ ಸಂಬಂಧ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪ್ರತಿಕ್ರಿಯಿಸಿದ್ದು, "ಮೇ 28 ರಂದು ನಡೆಯುವ ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಎಲ್ಲ ಸಮಾನಮನಸ್ಕ ಪಕ್ಷಗಳೊಂದಿಗೆ ಚರ್ಚಿಸಿದೆ. ಈ ವಿಷಯದಲ್ಲಿ ಎಲ್ಲ ಪ್ರತಿಪಕ್ಷಗಳು ಒಂದುಗೂಡಿರುವುದಕ್ಕೆ ನಮಗೆ ಸಂತೋಷವಾಗಿದೆ" ಎಂದು ಹೇಳಿದ್ದಾರೆ.
ರಾಜಕೀಯಗೊಳಿಸಬೇಡಿ - ಅಮಿತ್ ಶಾ : ಸೆಂಟ್ರಲ್ ವಿಸ್ಟಾ ಲೋಕಾರ್ಪಣೆ ಸಂಬಂಧ ಗೃಹ ಸಚಿವ ಅಮಿತ್ ಶಾ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, "ಈ ವಿಷಯವನ್ನು ಯಾವುದೇ ಕಾರಣಕ್ಕೂ ರಾಜಕೀಯಗೊಳಿಸಬಾರದು. ಇದು ಪುರಾತನ ಪ್ರಕ್ರಿಯೆಯನ್ನು ನವ ಭಾರತದೊಂದಿಗೆ ಸೇರಿಸುವ ಭಾವನಾತ್ಮಕ ಪ್ರಕ್ರಿಯೆ. ಇದನ್ನು ಇಷ್ಟಕ್ಕೆ ಸೀಮಿತವಾದ ಅರ್ಥದಲ್ಲಿ ನೋಡಬೇಕು" ಎಂದು ತೀಕ್ಷ್ಣ ತಿರುಗೇಟು ನೀಡಿದ್ದಾರೆ.
ಸಚಿವ ಜೋಶಿ ಹೇಳಿದ್ದೇನು?: ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಷಿ ಪ್ರತಿಕ್ರಿಯಿಸಿ, "ಇಂದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ರಾಜಕೀಯ ಮಾಡುವ ಸಮಯವಲ್ಲ. ಬಹಿಷ್ಕಾರ ಮಾಡುವುದನ್ನು ಹಾಗೂ ಅದನ್ನೇ ವಿಷಯವನ್ನಾಗಿ ಮಾಡುವುದು ಅತ್ಯಂತ ದುರದೃಷ್ಟಕರ. ತಮ್ಮ ನಿರ್ಧಾರವನ್ನು ಮರುಪರಿಶೀಲಿಸಿ, ಐತಿಹಾಸಿಕ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ನಾನು ಅವರಿಗೆ (ಪ್ರತಿಪಕ್ಷದವರಿಗೆ) ಮನವಿ ಮಾಡುತ್ತೇನೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ:ಹೊಸ ಸಂಸತ್ ಕಟ್ಟಡ ಉದ್ಘಾಟನೆ ವಿವಾದ: ಪ್ರಧಾನಿಯೇ ಸರ್ಕಾರದ ಮುಖ್ಯಸ್ಥರು- ಬಿಜೆಪಿ ಸಮರ್ಥನೆ