ಕರ್ನಾಟಕ

karnataka

ETV Bharat / bharat

'ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇಂದು ಕರಾಳ ದಿನ': ರಾಹುಲ್ ಗಾಂಧಿ ಅನರ್ಹತೆ ಖಂಡಿಸಿದ ಪ್ರತಿಪಕ್ಷದ ನಾಯಕರು - ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಕರಾಳ ದಿನ

ರಾಹುಲ್​ ಗಾಂಧಿಯ ಲೋಕಸಭಾ ಸದಸ್ಯ ಸ್ಥಾನದ ಅನರ್ಹತೆಯನ್ನು ಪ್ರತಿಪಕ್ಷಗಳ ನಾಯಕರ ಬಲವಾಗಿ ಖಂಡಿಸಿದ್ದಾರೆ. ದೇಶದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಕರಾಳ ದಿನ, ಬಿಜೆಪಿಯ ಸೇಡಿನ ರಾಜಕೀಯ ಹಾಗೂ ಸರ್ವಾಧಿಕಾರಿ ಕ್ರಮ ಎಂದು ಹಲವು ನಾಯಕರು ವಾಗ್ದಾಳಿ ನಡೆಸಿದ್ದಾರೆ.

opposition-parties-slams-bjp-and-modi-govt-after-rahul-gandhi-disqualification
'ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇಂದು ಕರಾಳ ದಿನ': ರಾಹುಲ್ ಗಾಂಧಿ ಅನರ್ಹತೆ ಖಂಡಿಸಿದ ಪ್ರತಿಪಕ್ಷದ ನಾಯಕರು

By

Published : Mar 24, 2023, 10:56 PM IST

ನವದೆಹಲಿ:ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಂಡ ರಾಹುಲ್​ ಗಾಂಧಿ ಪರವಾಗಿ ವಿವಿಧ ಪಕ್ಷಗಳ ನಾಯಕರು ಬೆಂಬಲಕ್ಕೆ ಬಂದಿದ್ದಾರೆ. ಕರ್ನಾಟಕದ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್​, ತೆಲಂಗಾಣ ಸಿಎಂ ಕೆ ಚಂದ್ರಶೇಖರ್​ ರಾವ್, ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್,​ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು​ ರಾಹುಲ್​ ಅನರ್ಹತೆಯನ್ನು ಖಂಡಿಸಿದ್ದಾರೆ.

ಇದನ್ನೂ ಓದಿ:ಅನರ್ಹ ಜನಪ್ರತಿನಿಧಿ ಪಟ್ಟಿಗೆ ಸೇರಿದ ರಾಹುಲ್ ಗಾಂಧಿ: ಚುನಾಯಿತ ಸ್ಥಾನ ಕಳೆದುಕೊಂಡ ರಾಜಕಾರಣಿಗಳು ಎಷ್ಟು?

ಇಂದು ಕೋಲ್ಕತ್ತಾದಲ್ಲಿ ಟಿಎಂಸಿ ನಾಯಕಿ, ಸಿಎಂ ಮಮತಾ ಅವರನ್ನು ಜೆಡಿಎಸ್​ ನಾಯಕ ಹೆಚ್‌ಡಿ ಕುಮಾರಸ್ವಾಮಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಹೆಚ್​ಡಿಕೆ, ಪ್ರಸ್ತುತ ದಿನಗಳಲ್ಲಿ ಕೇಂದ್ರ ಸರ್ಕಾರ ಹೇಗೆ ವರ್ತಿಸುತ್ತಿದೆ ಎಂಬುವುದು ಎಲ್ಲರಿಗೂ ಗೊತ್ತಿದೆ. ಕ್ಷುಲ್ಲಕ (ಸಿಲ್ಲಿ) ಕಾರಣಕ್ಕೆ ಸರ್ಕಾರವೇ ಸ್ವತಃ ನಿರ್ಧಾರ ತೆಗೆದುಕೊಂಡಿದೆ. ಈ ವಿಷಯದಿಂದ ಯಾರೂ ಕೂಡ ಅಚ್ಚರಿಗೊಂಡಿಲ್ಲ. ಇದೊಂದು ಸೇಡಿನ ರಾಜಕೀಯ ಎಂದು ಟೀಕಿಸಿದರು.

ನವ ಭಾರತದಲ್ಲಿ ಪ್ರತಿಪಕ್ಷಗಳು ಗುರಿ - ಮಮತಾ:ಪ್ರಧಾನಿ ಮೋದಿಯವರ ನವ ಭಾರತದಲ್ಲಿ ವಿರೋಧ ಪಕ್ಷದ ನಾಯಕರೇ ಬಿಜೆಪಿಯ ಪ್ರಧಾನ ಗುರಿಯಾಗಿದ್ದಾರೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕುಟುಕಿದ್ದಾರೆ. ಅಲ್ಲದೇ, ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಬಿಜೆಪಿ ನಾಯಕರನ್ನು ಸಂಪುಟಕ್ಕೆ ಸೇರಿಸಿಕೊಂಡರೆ, ವಿರೋಧ ಪಕ್ಷದ ನಾಯಕರನ್ನು ಅವರು ಮಾಡಿದ ಭಾಷಣಕ್ಕಾಗಿ ಅನರ್ಹಗೊಳಿಸಲಾಗಿದೆ. ಇಂದು ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವದ ಹೊಸ ಕುಸಿತಕ್ಕೆ ನಾವು ಸಾಕ್ಷಿಯಾಗಿದ್ದೇವೆ ಎಂದು ಮಮತಾ ಟ್ವೀಟ್​ ಮಾಡಿದ್ದಾರೆ.

ಫ್ಯಾಸಿಸ್ಟ್ ಕ್ರಮ - ಸಿಎಂ ಸ್ಟಾಲಿನ್: ಡಿಎಂಕೆ ಅಧ್ಯಕ್ಷ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಪ್ರತಿಕ್ರಿಯಿಸಿ, ಯುವ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವುದು ಫ್ಯಾಸಿಸ್ಟ್ ಕ್ರಮವಾಗಿದೆ. ಈ ಬೆದರಿಸುವ ಕ್ರಮವು ರಾಷ್ಟ್ರೀಯ ರಾಜಕೀಯ ಪಕ್ಷದ ನಾಯಕ ಮತ್ತು ಸಂಸದರಿಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಪ್ರಜಾಸತ್ತಾತ್ಮಕ ಹಕ್ಕನ್ನು ಹೊಂದಿಲ್ಲ ಎಂಬ ಸಂದೇಶ ರವಾನಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸಂಸದ ಸ್ಥಾನದಿಂದ ಅನರ್ಹ!

ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿರುವುದು ಸಂಸದರ ಪ್ರಜಾಸತ್ತಾತ್ಮಕ ಹಕ್ಕನ್ನು ಕಸಿದುಕೊಂಡಂತೆ. ಜಿಲ್ಲಾ ನ್ಯಾಯಾಲಯವು ತೀರ್ಪನ್ನು ಮಾತ್ರ ನೀಡಿತ್ತು. ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದು. ಸುಪ್ರೀಂಕೋರ್ಟ್​ನಲ್ಲೂ ಅಂತಿಮ ತೀರ್ಪು ಬರಬೇಕಿದೆ. ರಾಹುಲ್ ಗಾಂಧಿ ಮೇಲಿನ ಕ್ರಮವನ್ನು ಹಿಂಪಡೆಯಬೇಕು. ಅಲ್ಲದೇ, ರಾಹುಲ್ ವಿರುದ್ಧದ ಕ್ರಮವು ಪ್ರಗತಿಪರ ಪ್ರಜಾಸತ್ತಾತ್ಮಕ ಶಕ್ತಿಗಳ ಮೇಲಿನ ದಾಳಿಯಾಗಿದೆ. ಇದನ್ನು ಅರಿತುಕೊಂಡು ಒಗ್ಗಟ್ಟಿನಿಂದ ವಿರೋಧಿಸಬೇಕೆಂದು ನಾನು ಎಲ್ಲ ರಾಜಕೀಯ ಪಕ್ಷಗಳನ್ನು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.

ಅಪಾಯಕಾರಿ ಬೆಳವಣಿಗೆ - ಕೇಜ್ರಿವಾಲ್: ಆಪ್​ ರಾಷ್ಟ್ರೀಯ ಸಂಚಾಲಕ, ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಕೂಡ ರಾಹುಲ್​ ಅನರ್ಹತೆಯನ್ನು ಖಂಡಿಸಿದ್ದಾರೆ. ಇಂದು ತುಂಬಾ ಅಪಾಯಕಾರಿ ಬೆಳವಣಿಗೆಯಾಗಿದೆ. ಅವರು (ಬಿಜೆಪಿ) ಒಂದು ರಾಷ್ಟ್ರ, ಒಂದು ಪಕ್ಷ ಎಂಬ ವಾತಾವರಣವನ್ನು ಸೃಷ್ಟಿಸಲು ಬಯಸುತ್ತಾರೆ. ಇದು ಸರ್ವಾಧಿಕಾರಿಯ ವರ್ತನೆ ಮತ್ತು ಇದೊಂದು ಅತ್ಯಂತ ಹೇಡಿತನದ ಸರ್ಕಾರ. ಈ ಪ್ರಜಾಸತ್ತಾತ್ಮಕವಲ್ಲದ ಆಡಳಿತದ ವಿರುದ್ಧ ಹೋರಾಡುವ ಜವಾಬ್ದಾರಿ ಜನರ ಮೇಲಿದೆ ಎಂದು ಹೇಳಿದ್ದಾರೆ.

ಇದು ಕರಾಳ ದಿನ - ಕೆಸಿಆರ್​: ರಾಹುಲ್​ ವಿರುದ್ಧದ ಕ್ರಮವು ನರೇಂದ್ರ ಮೋದಿಯವರ ದುರಹಂಕಾರ ಮತ್ತು ಸರ್ವಾಧಿಕಾರಿ ಧೋರಣೆಯ ಪರಮಾವಧಿಯಾಗಿದೆ ಎಂದು ಬಿಆರ್‌ಎಸ್ ಅಧ್ಯಕ್ಷ ಮತ್ತು ತೆಲಂಗಾಣ ಸಿಎಂ ಕೆಸಿಆರ್​ ಟೀಕಾ ಪ್ರಹಾರ ಮಾಡಿದ್ದಾರೆ. ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇಂದು ಕರಾಳ ದಿನವಾಗಿದ್ದು, ಪ್ರಜಾಪ್ರಭುತ್ವ ಆಡಳಿತದ ಬಯಸುವವರೆಲ್ಲರೂ ಎನ್​ಡಿಎ ಸರ್ಕಾರದ ದುಷ್ಕೃತ್ಯಗಳನ್ನು ಖಂಡಿಸಬೇಕೆಂದು ಕರೆ ನೀಡಿದ್ದಾರೆ.

ಕಳ್ಳನನ್ನು ಕಳ್ಳ ಎನ್ನುವುದು ಅಪರಾಧ - ಉದ್ಧವ್:ಶಿವಸೇನೆ ನಾಯಕ, ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಸಹ ರಾಹುಲ್ ಗಾಂಧಿ​ ಅನರ್ಹತೆಯನ್ನು ಬಲವಾಗಿ ಖಂಡಿಸಿದ್ದಾರೆ. ನಮ್ಮ ದೇಶದಲ್ಲಿ ಕಳ್ಳನನ್ನು ಕಳ್ಳ ಎಂದು ಕರೆಯುವುದು ಅಪರಾಧವಾಗಿಬಿಟ್ಟಿದೆ. ಕಳ್ಳರು ಮತ್ತು ಲೂಟಿಕೋರರು ಇನ್ನೂ ಮುಕ್ತರಾಗಿದ್ದಾರೆ. ಆದರೆ, ರಾಹುಲ್ ಗಾಂಧಿಗೆ ಶಿಕ್ಷೆಯಾಗಿದೆ. ಇದು ಪ್ರಜಾಪ್ರಭುತ್ವದ ಕೊಲೆ. ಎಲ್ಲ ಸರ್ಕಾರಿ ವ್ಯವಸ್ಥೆಗಳು ಒತ್ತಡದಲ್ಲಿವೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:ವಯನಾಡ್​ಗೆ ಉಪಚುನಾವಣೆ, ರಾಹುಲ್​ ದೆಹಲಿ ಬಂಗಲೆ ಖಾಲಿ?: ಕೋರ್ಟ್​ ಆದೇಶ - ಅನರ್ಹತೆ ಪರಿಣಾಮಗಳೇನು?

ABOUT THE AUTHOR

...view details