ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮಂಡಿಸಲಾಗಿರುವ ಅವಿಶ್ವಾಸ ನಿಲುವಳಿ ಮೇಲೆ ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ಈವರೆಗೂ ಯಾವುದೇ ಹೇಳಿಕೆ ನೀಡದೇ ಇರುವುದು ಪ್ರತಿಪಕ್ಷಗಳ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಅವರು ಮಾತನಾಡಬೇಕು ಎಂದು ಸದನದಲ್ಲಿ ಒತ್ತಾಯಿಸಿದರು.
ನಿಲುವಳಿಯನ್ನು ಮಂಡಿಸಿರುವ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್, ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದರು. ಪ್ರಧಾನಿ ಮೋದಿ ಅವರು ಹಿಂಸಾಚಾರದಿಂದ ಹೊತ್ತಿ ಉರಿಯುತ್ತಿರುವ ಮಣಿಪುರಕ್ಕೆ ಈವರೆಗೂ ಭೇಟಿ ನೀಡಿಲ್ಲ. ವಿಪಕ್ಷಗಳ ಇಂಡಿಯಾ ಒಕ್ಕೂಟ, ಹಲವು ಮಂತ್ರಿಗಳು ಭೇಟಿ ನೀಡಿದ್ದಾರೆ. ಆದರೆ, ಆಡಳಿತದ ಪ್ರಮುಖ ಹುದ್ದೆಯಲ್ಲಿರುವ ಪ್ರಧಾನಿಗಳು ಮಾತ್ರ ರಾಜ್ಯಕ್ಕೆ ಭೇಟಿ ನೀಡಿ ಸಂಘರ್ಷ ನಿಲ್ಲಿಸುವ ಯತ್ನ ಮಾಡಿಲ್ಲ ಎಂದು ಟೀಕಿಸಿದರು.
ಅವಿಶ್ವಾಸದ ಮೇಲೆ ರಾಹುಲ್ ಮಾತು:ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಗೆ ತಡೆ ಸಿಕ್ಕಿರುವ ಹಿನ್ನೆಲೆ ಸಂಸದ ಸ್ಥಾನವನ್ನು ಮರಳಿ ಪಡೆದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅವಿಶ್ವಾಸ ನಿಲುವಳಿಯ ಮೇಲೆ ಪ್ರಧಾನ ವ್ಯಕ್ತಿಯಾಗಿ ಚರ್ಚೆ ನಡೆಸುವ ಸಾಧ್ಯತೆ ಇದೆ.
ಮೂರು ದಿನ ಚರ್ಚೆ :ಅವಿಶ್ವಾಸ ನಿರ್ಣಯದ ಮೇಲೆ ಇಂದಿನಿಂದ ಆಗಸ್ಟ್ 8 ರಿಂದ 10 ರ ವರೆಗೆ ಮೂರು ದಿನ ಚರ್ಚೆ ನಡೆಯಲಿದೆ. ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸುವ ಸಾಧ್ಯತೆ ಇದೆ.
ಬಿಜೆಪಿ ಸಂಸದೀಯ ಸಭೆ:ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಇಂಡಿಯಾ ಒಕ್ಕೂಟ ಅವಿಶ್ವಾಸ ನಿರ್ಣಯ ಮಂಡಿಸಿದ್ದರೆ, ಇತ್ತ ಬಿಜೆಪಿ ವಿಪಕ್ಷಗಳ ಎದುರಿಸಲು ಬೆಳಗ್ಗೆ ಸಂಸದೀಯ ಪಕ್ಷ ಸಭೆ ಸೇರಿತು. ಸಭೆಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ಪ್ರಮುಖರು ಪಾಲ್ಗೊಂಡಿದ್ದರು. ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆಯ ಬಳಿಕ ಸರ್ಕಾರ ರೂಪಿಸಬೇಕಾದ ಕಾರ್ಯತಂತ್ರದ ಕುರಿತು ಚರ್ಚೆ ನಡೆಸಲಾಯಿತು.
ಲೋಕಸಭೆಯಲ್ಲಿ ಗದ್ದಲ:ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವಿಶ್ವಾಸ ಮಂಡನೆಯ ಭಾಷಣ ಮಾಡಿದರು. ಮಣಿಪುರ, ಅದಾನಿ ಗ್ರೂಪ್ ಸೇರಿದಂತೆ ಪ್ರಧಾನಿ ಮೋದಿ ಅವರು ಮಾತನಾಡಬೇಕು ಎಂದು ಒತ್ತಾಯಿಸಿದರು. ಇದಾದ ಬಳಿಕ ಆಡಳಿತ ಪಕ್ಷದ ಸಚಿವರು ಮಾತನಾಡಲು ಶುರು ಮಾಡಿದಾಗ ವಿಪಕ್ಷಗಳಿಂದ ಭಾರೀ ಗದ್ದಲ ಏರ್ಪಟ್ಟಿತು. ಸ್ಪೀಕರ್ ಓಂ ಬಿರ್ಲಾ ಅವರು ಸತತ ಮನವಿ ಮಾಡಿದಾಗ್ಯೂ ವಿಪಕ್ಷ ಸದಸ್ಯರು ಚರ್ಚೆಗೆ ಅವಕಾಶ ನೀಡುತ್ತಿಲ್ಲ.
ಇದನ್ನೂ ಓದಿ:Delhi services bill: ಇನ್ನು ದಿಲ್ಲಿಗೆ ಕೇಂದ್ರವೇ ಬಾಸ್..ಬಹುಮತವಿಲ್ಲದಿದ್ದರೂ ರಾಜ್ಯಸಭೆಯಲ್ಲಿ ಸುಗ್ರೀವಾಜ್ಞೆ ಪಾಸ್, ರಾಷ್ಟ್ರಪತಿ ಅಂಕಿತ ಮಾತ್ರ ಬಾಕಿ