ಪಾಟ್ನಾ(ಬಿಹಾರ):2024ರ ಚುನಾವಣೆಗೆ ಮುನ್ನ ವಿರೋಧ ಪಕ್ಷದ ಸದಸ್ಯರ ನಡುವೆ ಒಗ್ಗಟ್ಟು ಮೂಡಿಸುವ ಪ್ರಯತ್ನವಾಗಿ ಬಿಜೆಪಿಯೇತರ ಪಕ್ಷಗಳ ಪ್ರಮುಖ ನಾಯಕರು ಜೂನ್ 23ರಂದು ಪಾಟ್ನಾದಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿಹಾರದ ಆಡಳಿತ ಪಕ್ಷ ಹಾಗೂ ಸಂಯುಕ್ತ ಜನತಾ ದಳದ ಮುಖ್ಯಸ್ಥ ಲಾಲನ್ ಸಿಂಗ್ ಬುಧವಾರ ಈ ವಿಚಾರವನ್ನು ಪ್ರಕಟಿಸಿದ್ದಾರೆ. ಸಿಂಗ್, ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರೊಂದಿಗೆ ಪಾಟ್ನಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಪ್ರಕಟಿಸಿದ್ದಾರೆ.
"ಜೂನ್ 23 ರಂದು ಪಾಟ್ನಾದಲ್ಲಿ ಪ್ರತಿಪಕ್ಷಗಳ ಸಭೆ ನಡೆಯಲಿದೆ. ಇದಕ್ಕೆ ಎಲ್ಲ ವಿರೋಧ ಪಕ್ಷಗಳು ಸಹಮತ ವ್ಯಕ್ತಪಡಿಸಿವೆ. ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್, ಉದ್ಧವ್ ಠಾಕ್ರೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಸಿಪಿಐನ ಡಿ ರಾಜಾ, ಸೀತಾರಾಮ್ ಯೆಚೂರಿ ಮತ್ತು ದೀಪಂಕರ್ ಭಟ್ಟಾಚಾರ್ಯ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ‘‘ ಎಂದು ಲಾಲನ್ ಸಿಂಗ್ ಇದೇ ವೇಳೆ ಸ್ಪಷ್ಟಪಡಿಸಿದರು.
"ನಾವು ಜೂನ್ 12 ರಂದು ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದ ನಾಯಕರ ಸಭೆ ಕರೆದಿದ್ದೇವೆ. ಆದರೆ, ಕೆಲವು ಅನಿವಾರ್ಯ ಕಾರಣಗಳಿಂದ ಹಲವಾರು ಮುಖ್ಯಮಂತ್ರಿಗಳು ಮತ್ತು ರಾಜಕೀಯ ಪಕ್ಷಗಳ ಇತರ ನಾಯಕರು ಪಾಟ್ನಾದಲ್ಲಿ ಸಭೆಗೆ ಹಾಜರಾಗಲು ಆಗುವುದಿಲ್ಲ ಎಂಬ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈಗ, ಪ್ರತಿ ಪಕ್ಷದ ಸದಸ್ಯರ ಸಭೆ ಪಾಟ್ನಾದಲ್ಲಿ ಜೂನ್ 23 ರಂದು ನಿಗದಿಯಾದ ಸಭೆಯಲ್ಲಿ ಭಾಗವಹಿಸುವುದಾಗಿ ಹೇಳಿವೆ ಎಂದು ಸಿಂಗ್ ಹೇಳಿದ್ದಾರೆ.