ಪಾಟ್ನಾ (ಬಿಹಾರ):ಬಿಹಾರ ಸಿಎಂ ನಿತೀಶ್ ಕುಮಾರ್ ದೇಶಾದ್ಯಂತ ಬಿಜೆಪಿ ವಿರೋಧಿ ಪಕ್ಷಗಳನ್ನು ಒಗ್ಗೂಡಿಸುವ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಇದಕ್ಕಾಗಿ ಇವರು ಜೂನ್ 12 ರಂದು ಬಿಜೆಪಿ ವಿರೋಧಿ ಪಕ್ಷಗಳ ನಾಯಕರ ಜಂಟಿ ಸಭೆ ನಡೆಸುವ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ ಆ ಸಭೆ ನಿರೀಕ್ಷೆಯಂತೆ ನಡೆಯುವ ಸಾಧ್ಯತೆ ಇಲ್ಲ ಎಂದು ವರದಿಯಾಗಿದೆ.
ಕಾಂಗ್ರೆಸ್ ಸೇರಿದಂತೆ ಕೆಲವು ಇನ್ನಿತರ ಪಕ್ಷಗಳ ನಾಯಕರಿಂದ ಯಾವುದೇ ದೃಢೀಕರಣವಿಲ್ಲದ ಕಾರಣ ಈ ಸಭೆಯನ್ನು ಮುಂದೂಡಬಹುದು ಎಂದು ಮಹಾಮೈತ್ರಿಕೂಟದ ಮೂಲಗಳು ಮಾಹಿತಿ ನೀಡಿವೆ. ಸಭೆಯನ್ನು ಜೂನ್ 23ಕ್ಕೆ ಮುಂದೂಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳುತ್ತಿವೆ.
ಈ ಮಧ್ಯೆ, ಜೂನ್ 12 ರಂದು ಪಾಟ್ನಾದ ಜ್ಞಾನ ಭವನದಲ್ಲಿ ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗುವ ಸಭೆಯ ಬಗ್ಗೆ ಸಂಯುಕ್ತ ಜನತಾ ದಳ ನಾಯಕರು ಮೌನವಾಗಿದ್ದಾರೆ. ಸಿಎಂ ನಿತೀಶ್ ಕುಮಾರ್ ಬಹುತೇಕ ವಿರೋಧ ಪಕ್ಷಗಳಿಗೆ ಆಹ್ವಾನ ಕಳುಹಿಸಿದ್ದರು. ಅವರೇ ಎಲ್ಲರೊಂದಿಗೆ ಮಾತನಾಡಿದ್ದರು. ಒಂದು ಹಂತದಲ್ಲಿ ಬಹುತೇಕ ವಿರೋಧ ಪಕ್ಷಗಳು ಸಭೆಗೆ ಹಾಜರಾಗುತ್ತವೆ ಮತ್ತು ಬಿಜೆಪಿ ವಿರುದ್ಧ ಇಡೀ ದೇಶಕ್ಕೆ ಸಂದೇಶವನ್ನು ನೀಡಲಾಗುವುದು ಎಂದು ಜೆಡಿಯು ನಾಯಕರು ಹೇಳಿಕೊಂಡಿದ್ದರು.
ಆದರೆ, ಈಗ ಪ್ರತಿಪಕ್ಷದ ಕೆಲವು ದೊಡ್ಡ ನಾಯಕರು ಸಭೆಗೆ ಹಾಜರಾಗುವ ಸಾಧ್ಯತೆ ಇಲ್ಲದಿರುವುದರಿಂದ ಅದನ್ನು ಮುಂದೂಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ನಾಯಕರ ಜೊತೆಗೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಸಹ ಸಭೆಗೆ ಹಾಜರಾಗುವುದು ಅನುಮಾನವಿತ್ತು ಎನ್ನಲಾಗಿದೆ. ಈ ನಡುವೆ ಕೇಜ್ರಿವಾಲ್ ಕೇಂದ್ರ ಸರ್ಕಾರ ತಂದಿರುವ ಸುಗ್ರೀವಾಜ್ಞೆ ವಿರೋಧಿಸುವಂತೆ ಬಿಜೆಪಿಯೇತರ ಪಕ್ಷಗಳ ಬೆಂಬಲ ಕೋರುತ್ತಿದ್ದಾರೆ.
ಅವರು ಕಾಂಗ್ರೆಸ್ ಬೆಂಬಲವನ್ನೂ ಕೋರಿದ್ದಾರೆ. ಆದರೆ ಬೆಂಬಲ ನೀಡಲು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೇಜ್ರಿವಾಲ್ ಪ್ರತಿಪಕ್ಷಗಳ ಸಭೆಗೆ ಬರುವ ಸಾಧ್ಯತೆಯೇ ಇರಲಿಲ್ಲ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರನ್ನು ಸಭೆಗೆ ಕರೆಯಲಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಹುತೇಕ ಪ್ರತಿಪಕ್ಷಗಳ ದೊಡ್ಡ ನಾಯಕರು ಸಭೆಗೆ ಹಾಜರಾಗದೇ ಇದ್ದರೆ, ಪ್ರತಿಪಕ್ಷಗಳ ಒಕ್ಕೂಟದ ಉದ್ದೇಶ ಈಡೇರುವುದಿಲ್ಲ ಎಂದು ಹೇಳಿದ್ದಾರೆ.
ಇದೆಲ್ಲವನ್ನೂ ಪರಿಗಣಿಸಿರುವ ನಿತೀಶ್ ಕುಮಾರ್ ಸದ್ಯಕ್ಕೆ ಈ ಮಹತ್ವದ ಸಭೆ ಮುಂದೂಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶೀಘ್ರದಲ್ಲೇ ಕಾಂಗ್ರೆಸ್ ನಾಯಕರೊಂದಿಗೆ ಮಾತನಾಡಿ ಮುಂದಿನ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇದು ನಿತೀಶ್ ಕುಮಾರ್ಗೆ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಸಂಸದ ರಾಹುಲ್ ಗಾಂಧಿ ಸಭೆಗೆ ಬಾರದಿದ್ದರೆ ಏನು ಗತಿ ಎಂಬುದೇ ಸಭೆ ರದ್ದಿಗೆ ಕಾರಣ ಎನ್ನಲಾಗಿದೆ. ಅದೇ ಸಮಯದಲ್ಲಿ, ತಮಿಳುನಾಡು ಸಿಎಂ ಸ್ಟಾಲಿನ್ ಕೂಡ ಜೂನ್ 12 ರಂದು ಸಭೆಗೆ ಹಾಜರಾಗಲು ಆಗಲ್ಲ ಎಂಬ ಅನಿಸಿಕೆ ವ್ಯಕ್ತಪಡಿಸಿದರಲ್ಲದೇ, ದಿನಾಂಕ ಮುಂದೂಡಲು ಮನವಿ ಮಾಡಿದರು ಎನ್ನಲಾಗಿದೆ.
ಬಿಹಾರ ಸಿಎಂ ನಿತೀಶ್ ಕುಮಾರ್ ಕಳೆದ ಹಲವು ತಿಂಗಳುಗಳಿಂದ ಈ ಅಭಿಯಾನದಲ್ಲಿ ತೊಡಗಿದ್ದರು. ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ವಿರೋಧ ಪಕ್ಷಗಳ ದೊಡ್ಡ ನಾಯಕರನ್ನು ಭೇಟಿ ಮಾಡಿದ್ದರು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಉದ್ಧವ್ ಠಾಕ್ರೆ, ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಮತ್ತು ಸಿಪಿಐ ನಾಯಕ ಡಿ ರಾಜಾ ಅವರನ್ನು ನಿತೀಶ್ ಭೇಟಿ ಮಾಡಿದ್ದರು. ಇದರೊಂದಿಗೆ ಸಭೆಗೆ ಎಲ್ಲರಿಗೂ ಆಹ್ವಾನ ಪತ್ರಗಳನ್ನು ಕಳುಹಿಸಲಾಗಿತ್ತು.
ಇದನ್ನು ಓದಿ:ಮಣಿಪುರ ಹಿಂಸಾಚಾರ : ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆ