ನವದೆಹಲಿ:ಗಾಜಾದ ಮೇಲೆ ಇಸ್ರೇಲ್ ನಡೆಸುತ್ತಿರುವ ಕದನಕ್ಕೆ ವಿರಾಮ ಹಾಗು ಅಲ್ಲಿನ ನಾಗರಿಕರ ರಕ್ಷಣೆಯ ಕುರಿತು ವಿಶ್ವಸಂಸ್ಥೆ ಅಂಗೀಕರಿಸಿದ ನಿರ್ಣಯದಿಂದ ಭಾರತ ದೂರ ಉಳಿದಿದ್ದು ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ) ಸೇರಿದಂತೆ ಹಲವು ವಿಪಕ್ಷಗಳು ಟೀಕಾಸಮರ ನಡೆಸಿವೆ. ಇದು 'ನಾಚಿಕೆಗೇಡಿನ ಸಂಗತಿ' ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಹೇಳಿದ್ದಾರೆ.
ಸಿಪಿಐ(ಎಂ) ಮತ್ತು ಸಿಪಿಐ ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ. ಹಮಾಸ್ ಸಂಘಟನೆಯ ವಿರುದ್ಧ ಗಾಜಾದ ಮೇಲೆ ಇಸ್ರೇಲ್ ಸೇನೆ ನಡೆಸುತ್ತಿರುವ ಯುದ್ಧವನ್ನು ನಿಲ್ಲಿಸಲು ಮತ್ತು ಸಂತ್ರಸ್ತರಿಗೆ ನೆರವಾಗುವ ಕುರಿತು ವಿಶ್ವಸಂಸ್ಥೆ ಕೈಗೊಂಡ ನಿರ್ಣಯದಿಂದ ಭಾರತ ಹಿಂದೇಟು ಹಾಕಿದ್ದು, ಆಘಾತಕಾರಿ. ಮಾನವೀಯ ಜವಾಬ್ದಾರಿಯನ್ನು ದೇಶ ಎತ್ತಿ ಹಿಡಿಯಬೇಕಿತ್ತು ಎಂದಿದೆ.
ಅಮೆರಿಕ ಮತ್ತು ಇಸ್ರೇಲ್‌ನ ಮಿತ್ರರಾಷ್ಟ್ರವಾಗಿರುವ ಭಾರತ, ವಿದೇಶಾಂಗ ನೀತಿಗಾಗಿ ಕದನ ವಿರಾಮ ಘೋಷಿಸುವ ಕುರಿತ ನಿರ್ಣಯದಿಂದ ದೂರವಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಈ ನಿರ್ಣಯವನ್ನು ಅಂಗೀಕರಿಸಿದ ಬಳಿಕ, ಇಸ್ರೇಲ್ ಗಾಜಾ ಪಟ್ಟಿಯಲ್ಲಿ ವಾಯು ಮತ್ತು ಭೂ ದಾಳಿ ಹೆಚ್ಚಿಸಿದೆ ಎಂದು ಸಿಪಿಐ (ಎಂ) ಮತ್ತು ಸಿಪಿಐ ಹೇಳಿಕೆಯಲ್ಲಿ ದೂರಿವೆ.
2.2 ಮಿಲಿಯನ್ ಪ್ಯಾಲೆಸ್ಟೀನಿಯನ್ನರ ನೆಲೆಯಾಗಿರುವ ಗಾಜಾದಲ್ಲಿ ಯುದ್ಧದಿಂದಾಗಿ ಎಲ್ಲಾ ಸಂವಹನಗಳು ಕಡಿತಗೊಂಡಿವೆ. ವಿಶ್ವಸಂಸ್ಥೆಯ ನಿರ್ಣಯವನ್ನು ಗೌರವಿಸಿ ತಕ್ಷಣದ ಕದನ ವಿರಾಮ ನೀಡಬೇಕು. ಈ ಯುದ್ಧ ನಿಲ್ಲಿಸಲು ಎರಡು ರಾಜ್ಯ ದೇಶ ಪರಿಹಾರ ಎಂದು ಹೇಳಿದೆ.
ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕಾ, 'ಕಣ್ಣಿಗೆ ಕಣ್ಣು ಎಂದು ಕೀಳುತ್ತಾ ಹೋದರೆ, ಇಡೀ ಜಗತ್ತೇ ಕುರುಡಾಗುತ್ತದೆ' ಎಂಬ ಮಹಾತ್ಮ ಗಾಂಧಿ ಹೇಳಿಕೆ ಉಲ್ಲೇಖಿಸಿದ್ದಾರೆ. ದೇಶವು ಅಹಿಂಸೆ ಮತ್ತು ಸತ್ಯದ ತತ್ವಗಳ ಮೇಲೆ ಸ್ಥಾಪಿತವಾಗಿದೆ. ರಾಷ್ಟ್ರೀಯತೆಯನ್ನು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಪ್ರತಿಪಾದಿಸಿದ್ದರು. ಮಾನವೀಯತೆಯು ಕಾನೂನಿಗಿಂತ ಮಿಗಿಲಾದುದು. ಯದ್ಧದಿಂದ ಲಕ್ಷಾಂತರ ಜನರಿಗೆ ಆಹಾರ, ನೀರು, ವೈದ್ಯಕೀಯ ನೆರವು, ಸಂವಹನ ಮತ್ತು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ತಕ್ಷಣವೇ ಅವರ ನೆರವಿಗೆ ಬರಬೇಕಾದದು ಮಾನವೀಯ ಧರ್ಮ' ಎಂದಿದ್ದಾರೆ.
ಬಿಜೆಪಿ ತಿರುಗೇಟು:ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಭಾರತ ಎಂದಿಗೂ ಭಯೋತ್ಪಾದನೆಯ ಪರವಾಗಿ ನಿಲ್ಲುವುದಿಲ್ಲ ಎಂಬುದನ್ನು ನಾಚಿಕೆ ಮತ್ತು ಆಘಾತಕ್ಕೊಳಗಾದವರು ಅರಿತುಕೊಳ್ಳಬೇಕು ಎಂದು ಹೇಳಿದೆ. ಪಕ್ಷದ ಹಿರಿಯ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ, ಇಸ್ರೇಲ್-ಪ್ಯಾಲೆಸ್ಟೈನ್ ವಿಷಯದ ಬಗ್ಗೆ ನಮ್ಮ ನಿಲುವು ದೃಢವಾಗಿದೆ. ಭಯೋತ್ಪಾದನೆಯ ಪರವಾಗಿ ನಿಲ್ಲುವವರು ಮಾತ್ರ ಇದನ್ನು ನಾಚಿಕೆಗೇಡು ಎಂದು ಭಾವಿಸುತ್ತಾರೆ. ಭಯೋತ್ಪಾದನೆಯನ್ನು ನಾವು ವಿರೋಧಿಸಲೇಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಹಮಾಸ್- ಇಸ್ರೇಲ್ ಕದನ ವಿರಾಮಕ್ಕೆ ವಿಶ್ವಸಂಸ್ಥೆ ನಿರ್ಣಯ: ಮತದಾನದಿಂದ ದೂರ ಉಳಿದ ಭಾರತ