ಮುಂಬೈ( ಮಹಾರಾಷ್ಟ್ರ): ಪ್ರತಿಪಕ್ಷಗಳ ಒಕ್ಕೂಟ ಇಂಡಿಯಾ ಮುಂಬೈನಲ್ಲಿ ಮಹತ್ವದ 2 ದಿನಗಳ ಸಭೆ ಸೇರಿದ್ದು, ಗುರುವಾರ ಮಹತ್ವದ ಸಮಾಲೋಚನೆ ನಡೆಸಿದೆ. ಇಂದು ಎಲ್ಲ ನಾಯಕರು ಒಕ್ಕೂಟದ ಮುಂದಿನ ಕಾರ್ಯತಂತ್ರ, ಮೈತ್ರಿಕೂಟದ ಲೋಗೋ, ನಾಯಕನ ಆಯ್ಕೆ, ಮುಂದಿನ ಚುನಾವಣೆ ಸಿದ್ಧತೆ ಮತ್ತು ಸಭೆಯ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿ ಘೋಷಣೆ ಮಾಡುವ ಸಾಧ್ಯತೆಗಳಿವೆ.
ಗುರುವಾರದ ಸಭೆಯಲ್ಲಿ 28 ಪಕ್ಷಗಳ 60ಕ್ಕೂ ಹೆಚ್ಚು ನಾಯಕರು ಸಭೆ ಸೇರಿ 2024 ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎಯನ್ನು ಎದುರಿಸಲು ತನ್ನ ಯೋಜನೆಗಳನ್ನು ಜಾರಿಗೊಳಿಸಲು ಮತ್ತು ಅದಕ್ಕೆ ವೇಗ ನೀಡಲು ನಿರ್ಧರಿಸಿದೆ. ಕೆಲವು ನಾಯಕರು ಸೀಟು ಹಂಚಿಕೆ ಅಂತಿಮಗೊಳಿಸುವ ಕೆಲಸ ಮಾಡುವಂತೆ ಸಲಹೆ ನೀಡಿದ್ದಾರೆ. ಈ ಕೆಲಸ ಕೆಲವೇ ವಾರಗಳಲ್ಲಿ ಜಂಟಿ ಕಾರ್ಯಸೂಚಿಯೊಂದಿಗೆ ಜಾರಿಗೆ ಬರುವಂತೆ ಪ್ರಸ್ತಾಪ ಮಾಡಿದ್ದಾರೆ.
ಮೈತ್ರಿಕೂಟದ ಮೂರನೇ ಸುತ್ತಿನ ಮಾತುಕತೆಯ ಮೊದಲ ದಿನದಂದು ಅನೌಪಚಾರಿಕವಾಗಿ ಕೆಲವು ಗಂಟೆಗಳ ಕಾಲ ಚರ್ಚೆ ನಡೆಸಲಾಯಿತು, ತಮ್ಮ ಕಾರ್ಯವನ್ನು ಶೀಘ್ರವಾಗಿ ಜಾರಿಗೊಳಿಸಲು ಒಗ್ಗಟಿನಿಂದ ಮುಂದಡಿ ಇಡಬೇಕು ಎಂಬುದನ್ನು ಒತ್ತಿ ಹೇಳಿದ್ದಾರೆ. ಇನ್ನು ಸಮನ್ವಯ ಸಮಿತಿ ಅಂತಿಮಗೊಳಿಸುವ ಪ್ರತಿಜ್ಞೆ ಮಾಡಲಾಗಿದೆ. ಉಪ-ಗುಂಪುಗಳನ್ನ ರಚನೆ ಮಾಡುವ ಮೂಲಕ ಲೋಕಸಭಾ ಚುನಾವಣೆಗೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಇದೇ ವೇಳೆ, ಸಮನ್ವಯ ಸಮಿತಿಯ ಭಾಗವಾಗಲು ಆಯಾ ಪಕ್ಷಗಳಿಂದ ಒಬ್ಬರ ಹೆಸರನ್ನು ನೀಡುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಭೆಯಲ್ಲಿ ಹಾಜರಿದ್ದ ಎಲ್ಲ 28 ಪಕ್ಷಗಳ ನಾಯಕರಿಗೆ ಮನವಿ ಮಾಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.
ಇಂದು ಮೈತ್ರಿಕೂಟದ ಲೋಗೋ ಅನಾವರಣ: ಇಂಡಿಯಾ ಮೈತ್ರಿಕೂಟದ ನಾಯಕರು ಇಂದು ಇಂಡಿಯಾ ಕೂಟದ ಲೋಗೋವನ್ನು ಇಂದು ಅನಾವರಣಗೊಳಿಸಲಿದೆ ಎಂದು ತಿಳಿದು ಬಂದಿದೆ. ವಿವಿಧ ಪಕ್ಷಗಳ ನಾಯಕರು ತಮ್ಮದೇ ಆದ ವಕ್ತಾರರನ್ನು ಹೊಂದಿರುವುದರಿಂದ ಪ್ರತಿ ಪಕ್ಷವು ಮೈತ್ರಿಕೂಟದ ಪರವಾಗಿ ಮಾತನಾಡುವ ವಕ್ತಾರರ ತಂಡವನ್ನು ಹೊಂದಲು ನಿರ್ಧರಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಬೆಳಗ್ಗೆ 11 ಗಂಟೆಗೆ ಆರಂಭವಾಗಲಿರುವ ಶುಕ್ರವಾರದ ಸಭೆಯ ಕಾರ್ಯಸೂಚಿಗಳ ಕುರಿತು ಮೈತ್ರಿಕೂಟದ ನಾಯಕರು ಚರ್ಚಿಸಿದರು. ಸಭೆ ಬಳಿಕ ಜಂಟಿ ಹೇಳಿಕೆ ಮತ್ತು ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೈತ್ರಿಕೂಟದ ಜಂಟಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಕನಿಷ್ಠ ನಾಲ್ಕು ಉಪ ಸಮಿತಿಗಳ ರಚನೆ ಮಾಡಲು ಒತ್ತು ನೀಡಲಾಗಿದೆ. ಕ್ರಿಯಾ ಯೋಜನೆ ಸಿದ್ಧಪಡಿಸುವುದು ಮತ್ತು ಸಾಮಾಜಿಕ ಮಾಧ್ಯಮವನ್ನು ನಿರ್ವಹಿಸುವುದು ಮತ್ತು ಸಂಶೋಧನೆ ಮತ್ತು ದತ್ತಾಂಶ ಒಳಗೊಂಡಂತೆ ಕನಿಷ್ಠ ನಾಲ್ಕು ಉಪ ಸಮಿತಿಗಳ ಜತೆ ಸಮನ್ವಯ ಸಮಿತಿ ರಚನೆ ಮಾಡಲು ಗುರುವಾರದ ಸಭೆಯಲ್ಲಿ ಚರ್ಚಿಸಲಾಗಿದೆ.
ಅಕ್ಟೋಬರ್ನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿ- ಮಮತಾ:ಅಲ್ಲದೇ, ಜಂಟಿ ಪ್ರಚಾರ ಮತ್ತು ರ‍್ಯಾಲಿಗಳನ್ನು ನಡೆಸುವುದಾಕ್ಕಾ ಪ್ರಚಾರ ಉಪ ಸಮಿತಿಗಳನ್ನು ಕೂಡಾ ರಚಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಮೈತ್ರಿಕೂಟದ ಸಂಚಾಲಕರ ಆಯ್ಕೆ ಬಗ್ಗೆ ಇಂದು ಮಹತ್ವದ ಸಮಾಲೋಚನೆ ನಡೆಯಲಿದೆ. ಅಕ್ಟೋಬರ್ 2 ರೊಳಗೆ ಪ್ರಣಾಳಿಕೆ ಹೊರತರಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಭೆಯಲ್ಲಿ ಪ್ರತಿಪಾದಿಸಿದರು ಎಂದು ತಿಳಿದುಬಂದಿದೆ. ಮುಂದಿನ ತಿಂಗಳ ಅಂತ್ಯದ ವೇಳೆಗೆ ಲೋಕಸಭೆ ಚುನಾವಣೆಗೆ ಪಕ್ಷಗಳ ನಡುವೆ ಸೀಟು ಹಂಚಿಕೆಯನ್ನು ಅಂತಿಮಗೊಳಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕರೆ ನೀಡಿದರು ಎಂದು ಗೊತ್ತಾಗಿದೆ.
ಸೀಟು ಹಂಚಿಕೆ ಮೊದಲೇ ಅಂತಿಮಗೊಳಿಸಿದರೆ ಅನುಕೂಲ- ಎಸ್‌ಪಿ:ಸಮಾಜವಾದಿ ಪಕ್ಷದ (ಎಸ್‌ಪಿ) ರಾಮ್ ಗೋಪಾಲ್ ಯಾದವ್ ಸಭೆಯಲ್ಲಿ ಮಾತನಾಡಿ, ರಾಜ್ಯಗಳಲ್ಲಿ ಪಕ್ಷಗಳ ನಡುವೆ ಸೀಟು ಹಂಚಿಕೆಯನ್ನು ಮೊದಲೇ ಅಂತಿಮಗೊಳಿಸುವಂತೆ ಒತ್ತಾಯಿಸಿದ್ದಾರೆ. ಸೆಪ್ಟೆಂಬರ್ 18 ರಿಂದ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿರುವ ಹಿನ್ನೆಲೆಯಲ್ಲಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎನ್‌ಡಿಎಯ ಅಚ್ಚರಿಯ ನಿರ್ಧಾರಗಳಿಗೆ ಪ್ರತಿತಂತ್ರ - ರಣತಂತ್ರ ರೂಪಿಸಲು ನಾವು ಸನ್ನದ್ಧರಾಗಿರಬೇಕು ಎಂದು ಸಲಹೆ ನೀಡಿದ್ದಾರೆ
ಗುರುವಾರದ ಸಭೆಯಲ್ಲಿ ಹೆಚ್ಚಿನ ನಾಯಕರು 2024 ರ ಚುನಾವಣಾ ಯೋಜನೆಗಳು- ಸಿದ್ಧತೆಗಳನ್ನು ಈಗಲೇ ಪೂರ್ಣಗೊಳಿಸಲು ಅಗತ್ಯ ಕಾರ್ಯಸೂಚಿ ರೂಪಿಸಲು ಸಮ್ಮತಿಸಿದರು ಎಂದು ತಿಳಿದು ಬಂದಿದೆ. ಕಾಂಗ್ರೆಸ್ ಅಧ್ಯಕ್ಷ ಖರ್ಗೆ, ಪಕ್ಷದ ಮಾಜಿ ಮುಖ್ಯಸ್ಥರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಬ್ಯಾನರ್ಜಿ, ಎಎಪಿ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸೇರಿದಂತೆ ಇತರರು ಅನೌಪಚಾರಿಕ ಮಾತುಕತೆಯಲ್ಲಿ ಭಾಗವಹಿಸಿದ್ದರು.
ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ ಮತ್ತು ಒಮರ್ ಅಬ್ದುಲ್ಲಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಸಿಪಿಐ(ಎಂ) ನ ಸೀತಾರಾಮ್ ಯೆಚೂರಿ, ಸಿಪಿಐನ ಡಿ ರಾಜಾ, ಸಿಪಿಐ(ಎಂಎಲ್) ದೀಪಂಕರ್ ಭಟ್ಟಾಚಾರ್ಯ, ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಆರ್‌ಎಲ್‌ಡಿಯ ಜಯಂತ್ ಚೌಧರಿ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯ ನಂತರ ಇಂಡಿಯಾ ಒಕ್ಕೂಟ ಎಲ್ಲ ನಾಯಕರಿಗೆ ಮಾಜಿ ಸಿಎಂ ಹಾಗೂ ಶಿವಸೇನಾ ನಾಯಕ ಉದ್ದವ್ ಠಾಕ್ರೆ ಭೋಜನಕೂಟವನ್ನು ಏರ್ಪಡಿಸಿದ್ದರು. ದೇಶದ ಏಕತೆ ಮತ್ತು ಸಾರ್ವಭೌಮತ್ವ ಬಲಪಡಿಸುವುದು ಮತ್ತು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಇಂದಿನ ಅಗತ್ಯವಾಗಿದೆ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಹೇಳಿದ್ದಾರೆ.(ಪಿಟಿಐ)
ಇದನ್ನು ಓದಿ:ಸಿಎಂ ಮಮತಾ ಬ್ಯಾನರ್ಜಿ ವಿದೇಶ ಪ್ರವಾಸಕ್ಕೆ ಕೇಂದ್ರ ಸರ್ಕಾರ ಅನುಮೋದನೆ