ನವದೆಹಲಿ: ದೇಶದಲ್ಲಿ ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂಬ ಆರೋಪವನ್ನು ಕೇಂದ್ರ ವಿದ್ಯುತ್ ಸಚಿವ ಆರ್.ಕೆ. ಸಿಂಗ್ ನಿರಾಕರಿಸಿದ್ದಾರೆ. 'ಈಟಿವಿ ಭಾರತ'ಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಇಲ್ಲದ ಸಮಸ್ಯೆ ಹುಟ್ಟು ಹಾಕಲು ಯತ್ನ
ದೆಹಲಿಯ ಕೇಜ್ರಿವಾಲ್ ಸರ್ಕಾರಕ್ಕೆ ವಿದ್ಯುತ್ ಉತ್ಪಾದನೆ, ಕಲ್ಲಿದ್ದಲಿನ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇಲ್ಲದ ವಿದ್ಯುತ್ ಸಮಸ್ಯೆಯನ್ನು ಅವರು ಹುಟ್ಟುಹಾಕಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ರು. ವಿದ್ಯುತ್ ಸಚಿವಾಲಯ, TPDDL ಮತ್ತು BSESನ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಸಿಂಗ್ ಪರಿಸ್ಥಿತಿ ಅವಲೋಕಿಸಿದ್ದಾರೆ.
ಇದು ರಾಜಕೀಯ
'ಈಟಿವಿ ಭಾರತ'ದ ಜತೆ ಮಾತನಾಡಿದ ಸಿಂಗ್, ವಿದ್ಯುತ್ ವಿಚಾರವಾಗಿ ಕೇಜ್ರಿವಾಲ್ ಮತ್ತು ಇತರೆ ಕೆಲವು ಪ್ರತಿಪಕ್ಷ ನಾಯಕರು ವದಂತಿ ಹರಡುವ ಮೂಲಕ ರಾಜಕೀಯ ಮಾಡಲು ಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ. ಅವರು ವಿದ್ಯುತ್ ಸಮಸ್ಯೆಯ ಗಮನ ಸೆಳೆಯಲು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಆದರೆ, ಇದಕ್ಕೂ ಮುನ್ನ ಆ ಪತ್ರ ಮಾಧ್ಯಮಗಳಲ್ಲಿ ಪ್ರಸಾರವಾಗಿರುವುದು ಪಕ್ಕಾ ರಾಜಕೀಯ ಎಂಬುದು ಸಾಬೀತಾಗಿದೆ. ನನಗೆ ನಿನ್ನೆ ಲೆಫ್ಟಿನೆಂಟ್ ಗವರ್ನರ್ರಿಂದ ಈ ಪತ್ರ ಸಿಕ್ಕಿದೆ. ಪ್ರತಿಪಕ್ಷದವರಿಗೆ ಸತ್ಯ ತಿಳಿದಿಲ್ಲ, ಅವರು ಮೊದಲು ಸತ್ಯ ಏನೆಂದು ಅರಿತುಕೊಂಡು ಬಳಿಕ ಆರೋಪಿಸಲಿ ಎಂದು ಟಾಂಗ್ ನೀಡಿದ್ರು.
ಒಪ್ಪಂದ ನವೀಕರಿಸಬೇಕಿರುವುದು ದೆಹಲಿ ಸರ್ಕಾರದ ಕರ್ತವ್ಯ
ದೆಹಲಿ ಸರ್ಕಾರ ವಿದ್ಯುತ್ ಪೂರೈಕೆ ಮಾಡುವ ಕಂಪನಿಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ನವೀಕರಿಸಿಲ್ಲ. ಈ ಹಿನ್ನೆಲೆ ಆ ಕಂಪನಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವುದಾಗಿ ಹೇಳಿದೆ. ಈ ಬೆನ್ನಲ್ಲೇ, TPDDL ನ ಸಿಇಒ ಗಾಬರಿಗೊಂಡು, ದೆಹಲಿ ವಿದ್ಯುತ್ ಕಡಿತವನ್ನು ಎದುರಿಸಬೇಕಾಗಬಹುದು ಎಂಬ ಸಂದೇಶವನ್ನು ಪ್ರಸಾರ ಮಾಡಿದರು. ಅವರ ಈ ನಿರ್ಧಾರ ಅಸಂಬದ್ಧವಾಗಿದೆ ಎಂದು ಕಿಡಿಕಾರಿದರು. ಜತೆಗೆ ವಿದ್ಯುತ್ ಸರಬರಾಜು ಮಾಡುವ ಕಂಪನಿಯೊಂದಿಗೆ ದೆಹಲಿ ಸರ್ಕಾರ ನಿರಂತರ ಸಂಪರ್ಕದಲ್ಲಿರಬೇಕಿತ್ತು ಎಂದು ಹೇಳಿದರು.
ಮೂರು ಕಂಪನಿಗಳ ನಿರ್ದೇಶಕರ ಜತೆ ಸಿಂಗ್ ಸಭೆ
ಸಿಂಗ್ ಅವರು ದೆಹಲಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ಕೆಲಸ ಮಾಡುವ ಎಲ್ಲಾ ಮೂರು ಕಂಪನಿಗಳ ಮುಖ್ಯ ವ್ಯವಸ್ಥಾಪಕ ನಿರ್ದೇಶಕರ ಜತೆ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸಿದ್ರು. ಒಂದು ಗಂಟೆಗೂ ಅಧಿಕ ಸಮಯ ನಡೆದ ಸಭೆಯ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ರು. ನಮ್ಮಲ್ಲಿ ಸಾಕಷ್ಟು ಕಲ್ಲಿದ್ದಲು ದಾಸ್ತಾನಿದ್ದು, ಯಾವುದೇ ಸಮಸ್ಯೆಯಿಲ್ಲ ಎಂದರು.