ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯ ಕಾರ್ಯತಂತ್ರಕ್ಕಾಗಿ ಬೆಂಗಳೂರಿನಲ್ಲಿ ಸಭೆ ಸೇರಿರುವ ಪ್ರತಿಪಕ್ಷಗಳ ಮೈತ್ರಿಕೂಟವನ್ನು ಇಂಡಿಯಾ ಎಂದು ನಾಮಕಾರಣ ಮಾಡಲಾಗಿದೆ. ಭಾರತೀಯ ರಾಷ್ಟ್ರೀಯ ಪ್ರಜಾಪ್ರಭುತ್ವ ಅಂತರ್ಗತ ಒಕ್ಕೂಟ (Indian National Democratic Inclusive Alliance - INDIA ) ಎಂದು ಹೆಸರಿಸಲು ತೀರ್ಮಾನಿಸಲಾಗಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಪ್ರಕಟಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದಲ್ಲಿ ನಗರದ ಖಾಸಗಿ ಹೋಟೆಲ್ನಲ್ಲಿ ರಾಷ್ಟ್ರೀಯ ವಿಪಕ್ಷಗಳ ಮೈತ್ರಿಕೂಟದ ಎರಡು ದಿನಗಳ ಸಭೆ ನಡೆಸಲಾಗಿದೆ. ಇಂದು ಮಹತ್ವದ ಸಭೆ ಬಳಿಕ ಖರ್ಗೆ ಮಾತನಾಡಿ, ತಮ್ಮ ಮಹಾ ಮೈತ್ರಿಕೂಟಕ್ಕೆ ಇಂಡಿಯಾ ಎಂದು ನಾಮಕಾರಣ ಮಾಡುವ ಕುರಿತು ಅಧಿಕೃತವಾಗಿ ಮಾಹಿತಿ ನೀಡಿದರು. ಈ ಸಭೆಯಲ್ಲಿ 26 ಪಕ್ಷಗಳ 46ಕ್ಕೂ ಅಧಿಕ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಈ ಮಹಾಮೈತ್ರಿಗೆ ಹೊಸ ನಾಮಕರಣ ಸಂಬಂಧ ನಾಲ್ಕು ಹೆಸರುಗಳನ್ನು ಪ್ರಸ್ತಾಪ ಮಾಡಲಾಗಿತ್ತು. ಮಹಾಮೈತ್ರಿಗೆ ಈಗಿರುವ ಯುಪಿಎ 3 ಅಥವಾ ಪ್ರೊಗ್ರೆಸಿವ್ ಡೆಮಾಕ್ರೆಟಿಕ್ ಅಲಯನ್ಸ್ (ಪಿಡಿಎ), ನ್ಯಾಷನಲ್ ಪ್ರೊಗ್ರೆಸಿವ್ ಅಲಯನ್ಸ್ (ಎನ್ಪಿಎ) ಮತ್ತು ಇಂಡಿಯಾ ಪ್ರೊಗ್ರೆಸಿವ್ ಅಲಯನ್ಸ್ ಎಂಬ ಹೆಸರುಗಳು ಚಾಲ್ತಿಗೆ ಬಂದಿದ್ದವು. ಅಂತಿಮವಾಗಿ ಇಂಡಿಯನ್ ನ್ಯಾಷನಲ್ ಡೆವೆಲಪ್ಮೆಂಟಲ್ ಇನ್ಕ್ಲೂಸಿವ್ ಅಲಯನ್ಸ್ (ಐಎನ್ಡಿಎಐ) ಎಂದು ಹೆಸರಿಸಲಾಗಿದೆ.
ಈ ಬಗ್ಗೆ ಸಭೆ ನಡೆಯುತ್ತಿರುವಾಗಲೇ ಮೈತ್ರಿಕೂಟದ ಕೆಲವು ನಾಯಕರು 'ಚಕ್ ದೇ ಇಂಡಿಯಾ' ಎಂದು ಟ್ವೀಟ್ ಮಾಡಿ ಕುತೂಹಲ ಮೂಡಿಸಿದ್ದರು. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿ, '2024 ಟೀಂ ಇಂಡಿಯಾ Vs ಟೀಂ ಎನ್‌ಡಿಎ ಆಗಿರುತ್ತದೆ. ಚಕ್ ದೇ ಇಂಡಿಯಾ' ಎಂದು ತಿಳಿಸಿದ್ದರು. ಅಲ್ಲದೇ, ಕಾಂಗ್ರೆಸ್ ಲೋಕಸಭಾ ಸಂಸದ ಮಾಣಿಕಂ ಠಾಗೋರ್, 'ಇಂಡಿಯಾ ವಿಲ್ ವಿನ್ (ಇಂಡಿಯಾ ಗೆಲ್ಲುತ್ತದೆ)' ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ, ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒಬ್ರಿಯಾನ್ ಸಹ 'ಚಕ್ ದೇ! ಇಂಡಿಯಾ' ಎಂದು ಟ್ವೀಟ್ ಮಾಡಿದ್ದಾರೆ.
2024ರ ಲೋಕಸಭೆ ಚುನಾವಣೆ ಸಂಬಂಧ ಕಾರ್ಯತಂತ್ರ ರೂಪಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕಿ ಸೋನಿಯಾ ಗಾಂಧಿ ಹಾಗೂ ಹಲವು ನಾಯಕರು ಇಂದಿನ ಸಭೆಯಲ್ಲಿ ಆರು ಪ್ರಮುಖ ಅಂಶಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ರಾಹುಲ್ ಗಾಂಧಿ, ಎನ್ಸಿಪಿ ವರಿಷ್ಠ ಶರದ್ ಪವಾರ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತಮಿಳುನಾಡು ಸಿಎಂ ಸ್ಟಾಲಿನ್, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಬಿಹಾರ ಸಿಎಂ ನಿತೀಶ್ ಕುಮಾರ್, ಲಾಲೂ ಪ್ರಸಾದ್ ಯಾದವ್, ಪಂಜಾಬ್ ಸಿಎಂ ಭಗವಂತ್ ಮಾನ್, ಬಿಹಾರ ಡಿಸಿಎಂ ತೇಜಸ್ವಿ ಯಾದವ್, ಫಾರೂಕ್ ಅಬ್ದುಲ್ಲಾ, ಅಖಿಲೇಶ್ ಯಾದವ್, ಸೀತಾರಾಮ್ ಯೆಚೂರಿ, ಓಮರ್ ಅಬ್ದುಲ್ಲಾ, ಡಿ.ರಾಜಾ, ವೈಕೋ, ಉದ್ದವ್ ಠಾಕ್ರೆ, ಮೆಹಬೂಬಾ ಮುಫ್ತಿ ಸೇರಿದಂತೆ 46ಕ್ಕೂ ಅಧಿಕ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ:Opposition parties meeting: ವಿಪಕ್ಷಗಳ ಸಭೆಯಲ್ಲಿ ಮಹಾಮೈತ್ರಿ ನಾಮಕರಣಕ್ಕೆ ನಾಲ್ಕು ಹೆಸರುಗಳ ಪ್ರಸ್ತಾವನೆ