ಕರ್ನಾಟಕ

karnataka

ETV Bharat / bharat

ಮಣಿಪುರ ಸಂಘರ್ಷ: ರಾಷ್ಟ್ರಪತಿಯೊಂದಿಗೆ ಇಂಡಿಯಾ ಮೈತ್ರಿ ಕೂಟದ 21 ಸಂಸದರ ಸಭೆ - etv bharat kannada 3

ಮಣಿಪುರ ಸಂಘರ್ಷದ ವಿಚಾರವಾಗಿ ರಾಷ್ಟ್ರಪತಿಯವರೊಂದಿಗೆ ಇಂಡಿಯಾ ಮೈತ್ರಿ ಕೂಟದ ಸಂಸದರು ಇಂದು ಚರ್ಚೆ ನಡೆಸಲಿದ್ದಾರೆ.

ಇಂಡಿಯಾ ಮೈತ್ರಿ ಕೂಟ ಸಂಸದರು
ಇಂಡಿಯಾ ಮೈತ್ರಿ ಕೂಟ ಸಂಸದರು

By

Published : Aug 2, 2023, 10:33 AM IST

Updated : Aug 2, 2023, 10:52 AM IST

ನವದೆಹಲಿ: ಮಣಿಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ಮೈತ್ರಿ ಕೂಟ 'ಇಂಡಿಯಾ'ದ 21 ಸಂಸದರು ಮತ್ತು ಹಲವು ನಾಯಕರು ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಚರ್ಚೆ ಮಾಡಲಿದ್ದಾರೆ. ಇಂದು 11.30ಕ್ಕೆ ಪ್ರತಿಪಕ್ಷಗಳ ನಾಯಕರು ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಸಭೆ ನಡೆಸಲಿದ್ದಾರೆ.

ಈ ಸಭೆಯಲ್ಲಿ ಮಣಿಪುರ ಮತ್ತು ಹರಿಯಾಣ ಸಮಸ್ಯೆ ಸೇರಿದಂತೆ ಸಂಸತ್ತಿನ ಕಾರ್ಯವೈಖರಿ ಕುರಿತು ವಿರೋಧ ಪಕ್ಷದ ಸಂಸದರು ರಾಷ್ಟ್ರಪತಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದರ ನೇತೃತ್ವ ವಹಿಸಲಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾಹಿತಿ ನೀಡಿದ್ದಾರೆ.

ಇದಕ್ಕೂ ಮುನ್ನ ಜುಲೈ 29-30 ರಂದು ವಿಪಕ್ಷಗಳ ಮೈತ್ರಿ ಕೂಟ 'ಇಂಡಿಯಾ'ದ 21 ಸಂಸದರ ನಿಯೋಗ ಮಣಿಪುರಕ್ಕೆ ಭೇಟಿ ನೀಡಿ ಅಲ್ಲಿಯ ಪರಿಸ್ಥಿತಿಯ ಬಗ್ಗೆ ಗಮನಿಸಿತ್ತು. ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಜನಾಂಗೀಯ ಸಂಘರ್ಷದ ಬಗ್ಗೆ ರಾಷ್ಟ್ರಪತಿಯವರೊಂದಿಗೆ ಚರ್ಚಿಸಲು ತೀರ್ಮಾನಿಸಿತ್ತು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಮುರ್ಮು ಅವರನ್ನು ಇಂಡಿಯಾ ಇಕ್ಕೂಟದ ನಿಯೋಗ ಭೇಟಿ ಮಾಡಲು ಅನುಮತಿ ಕೋರಿದ್ದರು. ಇದಕ್ಕೆ ರಾಷ್ಟ್ರಪತಿ ಒಪ್ಪಿಗೆ ಸೂಚಿಸಿ ಸಮಯ ನಿಗದಿ ಪಡಿಸಿದ್ದಾರೆ. ಮತ್ತೊಂದೆಡೆ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿ ಅವರು ಸದನಕ್ಕೆ ಬಂದು ಮಾತನಾಡಬೇಕು ಎಂದು ಆಗ್ರಹಿಸಿ ಪ್ರತಿಪಕ್ಷಗಳು ಮುಂಗಾರು ಅಧಿವೇಶನ ಆರಂಭವಾದಾಗಿನಿಂದಲೂ ಪ್ರತಿಭಟನೆ ನಡೆಸುತ್ತಿವೆ. ಉಭಯ ಸದನಗಳಲ್ಲೂ ಮಣಿಪುರ ಹಿಂಸಾಚಾರದ ವಿಷಯವಾಗಿ ವಿಪಕ್ಷದ ಪ್ರತಿಭಟನೆ ಮುಂದುವರೆದಿದೆ.

ಈ ಗದ್ದಲದಿಂದಾಗಿ ಉಭಯ ಸದನಗಳ ಕಲಾಪಕ್ಕೆ ಅಡ್ಡಿಯಾಗಿದೆ. ಮಣಿಪುರ ಹಿಂಸಾಚಾರದ ವಿಷಯದ ಬಗ್ಗೆ, ಸಂಸತ್ತಿನ ಗೊಂದಲದ ನಡುವೆ ಕಳೆದ ಬುಧವಾರ ಲೋಕಸಭೆಯಲ್ಲಿ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಅದನ್ನು ಸದನದಲ್ಲಿ ಚರ್ಚೆಗೆ ಅಂಗೀಕರಿಸಲಾಯಿತು. ಅಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಎಲ್ಲ ಪಕ್ಷಗಳ ನಾಯಕರ ಜತೆ ಮಾತನಾಡಿ ಈ ಪ್ರಸ್ತಾವನೆ ಕುರಿತು ಚರ್ಚೆ ನಡೆಸುವ ದಿನಾಂಕವನ್ನು ನಿರ್ಧರಿಸುವುದಾಗಿ ಹೇಳಿದ್ದರು.

ಅಮಿತ್ ಶಾ ಕೂಡ ಮಣಿಪುರ ಸಂಘರ್ಷ ಚರ್ಚೆಗೆ ಅವಕಾಶ ನೀಡುವುದಾಗಿ ಇಬ್ಬರು ವಿಪಕ್ಷ ನಾಯಕರುಗಳಿಗೆ ಪತ್ರ ಬರೆದಿದ್ದರು. ಸರ್ಕಾರವು ಚರ್ಚೆಗೆ ಸಿದ್ಧವಾಗಿದೆ ಮತ್ತು ಎಲ್ಲಾ ಪಕ್ಷಗಳ ಸಹಕಾರವನ್ನು ಕೋರುತ್ತದೆ ಎಂದು ಹೇಳಿದ್ದರೂ ಪಟ್ಟು ಬಿಡದ ವಿರೋಧ ಪಕ್ಷಗಳು ಪ್ರತಿಭಟನೆ ಮುಂದುವರೆಸಿವೆ.

ಇದನ್ನೂ ಓದಿ:ಈಗಲೇ ರಂಗೇರಿದ ಲೋಕಸಭೆ ಚುನಾವಣೆ ಕಣ: ಇಂದು ದೆಹಲಿಯಲ್ಲಿ ಮಹತ್ವದ ಸಭೆ, 50ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು ಭಾಗಿ!

Last Updated : Aug 2, 2023, 10:52 AM IST

ABOUT THE AUTHOR

...view details