ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದ್ದು, ತೀವ್ರ ಸಾವು- ನೋವು ಉಂಟಾಗುತ್ತಿದೆ. ಈ ಯುದ್ಧದಲ್ಲಿ ಅಮೆರಿಕ-ನಿರ್ಮಿತ ಕಾಂಪ್ಯಾಕ್ಟ್ ಎಫ್‌ಜಿಎಂ-148 ಜಾವೆಲಿನ್ ಟ್ಯಾಂಕ್ ವಿರೋಧಿ ಕ್ಷಿಪಣಿಯು ಉಕ್ರೇನ್‌ಗೆ ಪಡೆಗಳಿಗೆ ಉಪಯುಕ್ತವಾಗಿದೆ.
ಈ ಕ್ಷಿಪಣಿಯ ಪ್ರಮುಖ ಪ್ಲಸ್ ಪಾಯಿಂಟ್ ಎಂದರೆ, ಅದನ್ನು ಒಬ್ಬರೇ ಹೊತ್ತೊಯ್ಯಬಹುದು ಮತ್ತು ಉಡಾವಣೆ ಮಾಡಬಹುದು. ಪರಿಣಾಮವಾಗಿ, ಯುದ್ಧ ವಲಯದಲ್ಲಿ ಇದು ತುಂಬ ಅನುಕೂಲವಾಗಿದೆ. ಕಳೆದ ಎರಡು ದಶಕಗಳಿಂದ ಈ ಕ್ಷಿಪಣಿಯು ಅಮೆರಿಕ ಸೇನೆಯ ವಶದಲ್ಲಿದೆ. ಉಕ್ರೇನ್ ಮಾತ್ರವಲ್ಲದೆ, ಇನ್ನೂ 20 ದೇಶಗಳು ಯಂತ್ರಗಳ ಸಹಾಯವಿಲ್ಲದೆ ಮಾನವನೇ ಸಾಗಿಸಬಹುದಾದ ಈ ಕ್ಷಿಪಣಿಗಳನ್ನು ಹೊಂದಿವೆ. ಸಾಮಾನ್ಯವಾಗಿ ನ್ಯಾಟೋ (NATO) ಎಂದು ಕರೆಯಲಾಗುವ ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆಯ ಕೆಲವು ಸದಸ್ಯ ರಾಷ್ಟ್ರಗಳಿಗಿಂತ ಹೆಚ್ಚು ಸಂಖ್ಯೆಯ ಜಾವೆಲಿನ್ ಕ್ಷಿಪಣಿಗಳನ್ನು ಉಕ್ರೇನ್ ಸೇನೆಯು ಈಗ ಹೊಂದಿದೆ ಎಂದು ಹೇಳಲಾಗುತ್ತದೆ.
ರೇಥಿಯಾನ್ ಕ್ಷಿಪಣಿಗಳು (ಈ ಮೊದಲು ಟೆಕ್ಸಾಸ್ ಇನ್‌ಸ್ಟ್ರುಮೆಂಟ್ ಎಂದು ಪ್ರಸಿದ್ಧವಾಗಿದ್ದವು) ಮತ್ತು ಲಾಕ್ಹೀಡ್ ಮಾರ್ಟಿನ್ (ಈ ಹಿಂದೆ ಮಾರ್ಟಿನ್ ಮರಿಯೆಟ್ಟಾ ಎಂದು ಕರೆಯಲಾಗುತ್ತಿತ್ತು) ನಡುವಿನ ಜಂಟಿ ಉದ್ಯಮವಾಗಿರುವ ಜಾವೆಲಿನ್ ಜಾಯಿಂಟ್ ವೆಂಚರ್ ಈ ಜಾವೆಲಿನ್ ಅನ್ನು ವಿನ್ಯಾಸಗೊಳಿಸಿದೆ. ಇದು ಟಾಪ್-ಅಟ್ಯಾಕ್ ಮೋಡ್‌ನಲ್ಲಿ 490 ಅಡಿ ಎತ್ತರವನ್ನು ಮತ್ತು ಡೈರೆಕ್ಟ್-ಫೈರ್ ಮೋಡ್‌ನಲ್ಲಿ 200 ಅಡಿ ಎತ್ತರವನ್ನು ತಲುಪಬಹುದು. ಇದು ಯಾವುದೇ ಸೇನೆಯಲ್ಲಿ ಪ್ರಮುಖವಾಗಿರುವ ಯುದ್ಧ ಟ್ಯಾಂಕ್ ಅನ್ನು ನಾಶಪಡಿಸಬಲ್ಲದು ಹಾಗೂ ಕಡಿಮೆ ಎತ್ತರದಲ್ಲಿ ಹಾರುವ ಹೆಲಿಕಾಪ್ಟರ್ ಅನ್ನೂ ಗುರಿಯಿಟ್ಟು ಹೊಡೆಯಬಲ್ಲದು. ಮೊದಲ ಬಾರಿಗೆ 1991ರಲ್ಲಿ ಇದರ ಪರೀಕ್ಷೆ ನಡೆಸಲಾಯಿತು. ಇರಾಕ್ ಮತ್ತು ಅಫ್ಘಾನಿಸ್ತಾನದ ಯುದ್ಧದ ಸಮಯದಲ್ಲಿ 5,000ಕ್ಕೂ ಹೆಚ್ಚು ಕಾರ್ಯಾಚರಣೆಗಳಲ್ಲಿ ಈ ಕ್ಷಿಪಣಿಯನ್ನು ವ್ಯಾಪಕವಾಗಿ ಮತ್ತು ಮತ್ತು ಯಶಸ್ವಿಯಾಗಿ ಬಳಸಲಾಯಿತು. ಈ ಕ್ಷಿಪಣಿ ವ್ಯವಸ್ಥೆಯನ್ನು ಕ್ರಿ.ಶ. 2050ರವರೆಗೆ ದಾಸ್ತಾನು ಮಾಡಲು ನಿರ್ಧರಿಸಲಾಗಿದೆ.
ಪ್ರಸ್ತುತ, ಎಫ್‌ಜಿಎಂ-148 ಜಾವೆಲಿನ್ ವಿಶ್ವದ ಅತ್ಯಂತ ಸುಧಾರಿತ, ಮಾನವರೇ ಸಾಗಿರಬಹುದಾದ ಟ್ಯಾಂಕ್ ನಿರೋಧಕ ಮಾರ್ಗದರ್ಶಿ ಕ್ಷಿಪಣಿ ವ್ಯವಸ್ಥೆಗಳಲ್ಲಿ ಒಂದಾಗಿದೆ. ಜಾವೆಲಿನ್ ಕ್ಷಿಪಣಿ ವ್ಯವಸ್ಥೆಯು ಎರಡು ಭಾಗಗಳನ್ನು ಹೊಂದಿದೆ. ಅವುಗಳೆಂದರೆ ಕಮಾಂಡ್ ಲಾಂಚ್ ಯುನಿಟ್ (ಸಿಎಲ್‌ಯು) ಮತ್ತು ಕ್ಷಿಪಣಿ ಸಹಿತವಾದ ಲಾಂಚರ್ ಟ್ಯೂಬ್. ಸಿಎಲ್‌ಯು ಬಿಡಿಭಾಗವನ್ನು ಮರುಬಳಕೆ ಮಾಡಬಹುದು. ಆದರೆ, ಟ್ಯೂಬ್ ಅನ್ನು ಎಸೆಯಬೇಕಾಗುತ್ತದೆ. ಈ ಜಾವೆಲಿನ್‌ನಲ್ಲಿ ಒಟ್ಟು ಐದು ರೂಪಾಂತರಗಳಿವೆ.