ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) :ಜಮ್ಮು ಮತ್ತು ಕಾಶ್ಮೀರದ ಪೂಂಚ್ - ರಾಜೌರಿ ಸೆಕ್ಟರ್‌ನಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು 'ಆಪರೇಷನ್ ಸರ್ವಶಕ್ತಿ' ಕಾರ್ಯಾಚರಣೆ ನಡೆಸಲು ಸಜ್ಜಾಗಿದೆ. ಇದು ದೊಡ್ಡ ಪ್ರಮಾಣದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಾಗಿದ್ದು, ಉಗ್ರವಾದವನ್ನು ಸರ್ವನಾಶ ಮಾಡುವುದಾಗಿದೆ.
ಭಾರತೀಯ ಸೇನೆ, ಗುಪ್ತಚರ ಸಂಸ್ಥೆಗಳು ಮತ್ತು ರಾಜ್ಯ ಪೊಲೀಸ್ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಲಿವೆ. ಇದನ್ನು ಪಿರ್ ಪಂಜಾಲ್ ಶ್ರೇಣಿಯ ಸೈನಿಕರು ನಡೆಸುತ್ತಾರೆ. ಸಂಪೂರ್ಣ ಕಾರ್ಯಾಚರಣೆಯನ್ನು ಸೇನಾ ಪ್ರಧಾನ ಕಚೇರಿ ಮತ್ತು ಉತ್ತರ ಕಮಾಂಡ್‌ನಿಂದ ಮೇಲ್ವಿಚಾರಣೆ ಮಾಡಲಾಗುತ್ತದೆ. ಪೂಂಚ್ ಮತ್ತು ರಜೌರಿ ಪ್ರದೇಶಗಳಲ್ಲಿ ಉಗ್ರರ ಒಳನುಸುಳುವಿಕೆ ಹೆಚ್ಚಿದ ಕಾರಣ ಈಗಾಗಲೇ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.
ಸೇನಾ ವಾಹನಗಳ ಮೇಲೆ ದಾಳಿ:ಪೂಂಚ್- ರಜೌರಿ ವಲಯದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಈಚೆಗೆ ಹೆಚ್ಚಾಗುತ್ತಿವೆ. ಜನವರಿ 12 ರಂದು ಸೇನಾ ವಾಹನಗಳ ಬೆಂಗಾವಲು ಪಡೆಯ ಮೇಲೆ ಶಂಕಿತ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಇದಕ್ಕೂ ಮೊದಲು ಡಿಸೆಂಬರ್ 21 ರಂದು ಧಾತ್ಯಾರ್ ಮೋರ್‌ನಲ್ಲಿ ಸೇನಾ ವಾಹನಗಳ ಮೇಲೆ ದಾಳಿ ನಡೆದಿತ್ತು. ಘಟನೆಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಇದರ ಬೆನ್ನಲ್ಲೇ ಈ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ.