ಚಂಡೀಗಢ: ಪಂಜಾಬ್ ಆಪ್ ಸರ್ಕಾರವನ್ನು ಕೆಡವಲು ಬಿಜೆಪಿ ಯತ್ನಿಸುತ್ತಿದೆ. ಇದಕ್ಕಾಗಿ ಆಪ್ ಶಾಸಕರನ್ನು ಖರೀದಿ ಮಾಡಲು ಮುಂದಾಗಿದೆ ಎಂಬ ಆರೋಪದ ಮಧ್ಯೆಯೇ ಮುಖ್ಯಮಂತ್ರಿ ಭಗವಂತ್ ಮಾನ್ ಸರ್ಕಾರ ಸೆಪ್ಟೆಂಬರ್ 22 ರಂದು ವಿಧಾನಮಂಡಲ ವಿಶೇಷ ಅಧಿವೇಶನ ಕರೆದಿದ್ದು, ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.
ವಿಧಾನಮಂಡಲದ ವಿಶೇಷ ಅಧಿವೇಶನವು ಸೆಪ್ಟೆಂಬರ್ 22 ರಂದು ನಡೆಯಲಿದೆ. ಆಪ್ ಸರ್ಕಾರ ವಿಶ್ವಾಸಮತ ಯಾಚನೆ ಮಾಡಲಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಟ್ವೀಟ್ ಮಾಡಿದ್ದಾರೆ.
ಪಂಜಾಬ್ ಆಪ್ ಸರ್ಕಾರವನ್ನು ಕೆಡವಲು ಬಿಜೆಪಿ ತಂತ್ರ ರೂಪಿಸುತ್ತಿದ್ದು, ಅದರ ಭಾಗವಾಗಿ ನಮ್ಮ ಶಾಸಕರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದೆ. ಹಣದ ಆಮಿಷವೊಡ್ಡಿ ಪಂಜಾಬ್ ಜನರು ಮೆಚ್ಚಿ ರಚಿಸಿರುವ ನೆಚ್ಚಿನ ಸರ್ಕಾರವನ್ನು ಬೀಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಿಎಂ ಭಗವಂತ್ ಮಾನ್ ಆರೋಪಿಸಿದ್ದಾರೆ.
ಜನ ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಜನರ ಈ ನಂಬಿಕೆಯನ್ನು ನಾವು ಮತ್ತು ನಮ್ಮ ಶಾಸಕರು ಉಳಿಸಿಕೊಳ್ಳುತ್ತೇವೆ. ಹೀಗಾಗಿ ಸೆ.22ರಂದು ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಲಾಗಿದೆ. ಈ ವೇಳೆ, ವಿಶ್ವಾಸಮತ ಯಾಚನೆ ಮಾಡಲಾಗುತ್ತದೆ. ಇದರಲ್ಲಿ ಗೆದ್ದು ನಮ್ಮ ಶಕ್ತಿ ತೋರಿಸಲಾಗುವುದು ಎಂದು ಹೇಳಿದರು.