ನವದೆಹಲಿ: ಇಸ್ರೇಲ್ ಮತ್ತು ಪಾಲೇಸ್ಟೆನ್ ಹಮಾಸ್ ಉಗ್ರರ ನಡುವೆ ಸಂಘರ್ಷ ಮುಂದುವರೆದಿದ್ದು, ಇಸ್ರೇಲ್ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ ಭಾರತ ಸರ್ಕಾರವು ಯುದ್ಧಪೀಡಿತ ಇಸ್ರೇಲ್ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಆಪರೇಷನ್ ಅಜಯ್ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ಮೂಲಕ ಈಗಾಗಲೇ ಸಾವಿರಾರು ಭಾರತೀಯರನ್ನು ಮರಳಿ ತಾಯ್ನಾಡಿಗೆ ಕರೆ ತರಲಾಗಿದೆ.
ಭಾನುವಾರ ರಾತ್ರಿ ಭಾರತೀಯರನ್ನು ಹೊತ್ತ ಆರನೇ ವಿಮಾನವು ಇಸ್ರೇಲಿನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ದೆಹಲಿಗೆ ಆಗಮಿಸಿದ 143 ಭಾರತೀಯರನ್ನು ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ಫಗ್ಗಾನ್ ಸಿಂಗ್ ಕುಲಾಸ್ತೆ ಬರಮಾಡಿಕೊಂಡರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯುದ್ಧ ಪೀಡಿತ ಇಸ್ರೇಲ್ನಿಂದ ಆಗಮಿಸಿದ ಭಾರತೀಯರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತ ಮಾಡಿದೆ. ಇಸ್ರೇಲ್ನಿಂದ ಸುರಕ್ಷಿತವಾಗಿ ಭಾರತಕ್ಕೆ ಮರಳಿದ ಭಾರತೀಯರನ್ನು ಸ್ವಾಗತಿಸಲು ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಸಂತೋಷವಾಯಿತು. ಒಟ್ಟು 143 ಭಾರತೀಯರನ್ನು ಇಸ್ರೇಲ್ನಿಂದ ಯಶಸ್ವಿಯಾಗಿ ಕರೆತರಲಾಗಿದೆ. ಜೊತೆಗೆ ಇಸ್ರೇಲ್ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಹೇಳಿದರು. ಇಸ್ರೇಲಿನಿಂದ ಆಗಮಿಸಿದ ವಿಮಾನದಲ್ಲಿ 143 ಭಾರತೀಯರ ಜೊತೆಗೆ ಇಬ್ಬರು ನೇಪಾಳಿ ಪ್ರಜೆಗಳು ಇದ್ದರು.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಆಪರೇಷನ್ ಅಜಯ್ ಕಾರ್ಯಾಚರಣೆಯಲ್ಲಿ ಭಾರತೀಯ ನಾಗರೀಕರನ್ನು ಒಳಗೊಂಡ ಆರನೇ ವಿಮಾನವು ಇಸ್ರೇಲ್ನಿಂದ ದೆಹಲಿಗೆ ಬಂದು ತಲುಪಿದೆ. ಇದರಲ್ಲಿ ಒಟ್ಟು 143 ಭಾರತೀಯರು ಮತ್ತು 2 ನೇಪಾಳಿ ಪ್ರಜೆಗಳಿದ್ದರು. ದೆಹಲಿಗೆ ತಲುಪಿದ ಭಾರತೀಯರನ್ನು ಕೇಂದ್ರ ಸಚಿವ ಫಗ್ಗಾನ್ ಸಿಂಗ್ ಬರಮಾಡಿಕೊಂಡರು ಎಂದು ಹೇಳಿದ್ದಾರೆ.