ನವದೆಹಲಿ: ಹರಿದ್ವಾರ ಮತ್ತು ದೆಹಲಿಯಲ್ಲಿ ನವೆಂಬರ್ 17 ಮತ್ತು 19 ರಂದು ನಡೆದ 'ಧರ್ಮ ಸಂಸದ್' ಕಾರ್ಯಕ್ರಮದಲ್ಲಿ ಮಾಡಿದ ಉದ್ರೇಕಕಾರಿ ದ್ವೇಷ ಭಾಷಣಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಸುಪ್ರೀಂಕೋರ್ಟ್‌ನ 76 ಹಿರಿಯ ವಕೀಲರು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಸುಪ್ರೀಂಕೋರ್ಟ್‌ನ 76 ವಕೀಲರು ಸಿಜೆಐ ಎನ್.ವಿ.ರಮಣ ಅವರಿಗೆ ಪತ್ರ ಬರೆದು, ದೆಹಲಿ ಮತ್ತು ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ ಎರಡು ಧಾರ್ಮಿಕ ಕಾರ್ಯಕ್ರಮಗಳಲ್ಲಿ 'ಜನಾಂಗೀಯ ಹತ್ಯಾಕಾಂಡ'ದ ಕರೆ ನೀಡಿದ್ದು, ಈ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸುವಂತೆ ಮನವಿ ಮಾಡಿದ್ದಾರೆ.
ಸನಾತನ ಧರ್ಮದ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಹರಿದ್ವಾರದ ವೇದ ನಿಕೇತನ ಧಾಮದಲ್ಲಿ ಜುನಾ ಅಖಾಡದ ಮಹಾಮಂಡಲೇಶ್ವರ ಸ್ವಾಮಿ ಯತಿ ನರಸಿಂಹಾನಂದ ಗಿರಿ ಅವರ ನೇತೃತ್ವದಲ್ಲಿ ಮೂರು ದಿನಗಳ 'ಧರ್ಮ ಸಂಸದ್' ಕಾರ್ಯಕ್ರಮ ಆಯೋಜಿಸಲಾಗಿತ್ತು. ದೆಹಲಿಯಲ್ಲಿ ಸಹ ಹಿಂದೂ ಯುವ ವಾಹಿನಿ ಇದೇ ರೀತಿಯ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ದ್ವೇಷದ ಭಾಷಣ ಮಾಡಿದ್ದಲ್ಲದೇ, ಸಮುದಾಯವೊಂದರ ಹತ್ಯೆಗೆ ಮುಕ್ತ ಕರೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.