ಚಂಡೀಗಢ (ಪಂಜಾಬ್): ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮತ್ತು ಧುರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಭಗವಂತ್ ಮಾನ್ ಗೆಲುವು ಸಾಧಿಸಿದ್ದಾರೆ. ವಿಧಾನಸಭಾ ಚುನಾವಣೆ ಮುಗಿದ ನಂತರ ಉಪಚುನಾವಣೆಗಳು ಆರಂಭವಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದ್ರೀಗ ರಾಜ್ಯವು ಉಪಚುನಾವಣೆಗಳ ಗೊಂದಲಗಳಿಂದ ಪಾರಾಗಿದೆ.
ರಾಜ್ಯದ ವಿವಿಧ ಪಕ್ಷಗಳ ನಾಲ್ವರು ನಾಯಕರು ವಿವಿಧ ಕೇತ್ರದಲ್ಲಿ ಸ್ಪರ್ಧಿಸಿದ್ದು, ಗೆದ್ದಿದ್ದರೆ ಖಾಲಿಯಾಗುವ ಆ ಕ್ಷೇತ್ರಗಳಿಗೆ ಉಪ ಚುನಾವಣೆಗಳು ನಡೆಯುತ್ತಿತ್ತು. ಭಗವಂತ್ ಮಾನ್ ಅವರು ಗೆದ್ದಿದ್ದು, ಅವರ ಲೋಕಸಭಾ ಕ್ಷೇತ್ರವಾದ ಸಂಗ್ರೂರ್ನಲ್ಲಿ ಮಾತ್ರ ಉಪಚುನಾವಣೆ ನಡೆಯಲಿದೆ. ಲೋಕಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಮುಖ್ಯಮಂತ್ರಿ ಗದ್ದುಗೆ ಏರುವುದು ಈಗಾಗಲೇ ಖಚಿತವಾಗಿದೆ.
ಪಂಜಾಬ್‌ನ ನಿರ್ಗಮಿತ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರು ಚಮ್ಕೌರ್ ಸಾಹಿಬ್ ಮತ್ತು ಭದೌರ್ ಎಂಬ ಎರಡು ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಆದರೆ, ಅವರು ಎರಡೂ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದ್ದಾರೆ. ಒಂದು ವೇಳೆ, ಅವರು ಎರಡೂ ಸ್ಥಾನಗಳಲ್ಲಿ ಗೆದ್ದಿದ್ದರೆ ಒಂದು ಸ್ಥಾನ ಬಿಟ್ಟುಕೊಡಬೇಕಾದ ಪರಿಸ್ಥಿತಿ ಎದುರಾಗಿ, ಉಪಚುನಾವಣೆ ನಡೆಸುವುದು ಖಚಿತವಾಗಿತ್ತು.