ತಿರುವನಂತಪುರಂ (ಕೇರಳ) :ಪರಿಶಿಷ್ಟ ಜಾತಿ ಮತ್ತು ಸಮುದಾಯಕ್ಕೆ ಸೇರಿದ ಕೇರಳದ ಎಸ್‌ಸಿ/ಎಸ್‌ಟಿ ಕಲ್ಯಾಣ ಸಚಿವ ಕೆ.ರಾಧಾಕೃಷ್ಣನ್ ಅವರು ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ ತಾರತಮ್ಯ ಎದುರಿಸಿದ ಘಟನೆ ಮಾಸುವ ಒಂದು ತಿಂಗಳ ಮುನ್ನವೇ ಗುರುವಾಯೂರ್ ದೇವಸ್ವಂ ಮಂಡಳಿಯಲ್ಲಿ ಹೊಸ ವಿವಾದವೊಂದು ಭುಗಿಲೆದ್ದಿದ್ದು, ಗುರುವಾಯೂರಿನಲ್ಲಿರುವ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಅಡುಗೆ ಮಾಡುವವರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಬ್ರಾಹ್ಮಣರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಎಂದು ತಿಳಿಸಲಾಗಿದೆ.
ಈ ಕುರಿತು, ಕೇರಳ ದೇವಸ್ವಂ ನೇಮಕಾತಿ ಮಂಡಳಿ ಅಧಿಸೂಚನೆ ಹೊರಡಿಸಿದ್ದು, ದೇವಸ್ಥಾನದ ಅಡುಗೆಯ ಹುದ್ದೆಗೆ ಬ್ರಾಹ್ಮಣ ಪುರುಷರು ಮಾತ್ರ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ. ಅಷ್ಟೇ ಅಲ್ಲ, ಅದರಲ್ಲೂ ಮಲಯಾಳಂ ಓದಲು ಮತ್ತು ಬರೆಯಲು ಬಲ್ಲ ಸಮರ್ಥ ಪುರುಷ ಹಾಗೂ ಹಿಂದೂ ಬ್ರಾಹ್ಮಣರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆದರೆ, ವಿಕಲಚೇತನರು ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.
1983 ರಲ್ಲಿ ಸ್ಥಾಪಿಸಲಾದ ಗುರುವಾಯೂರ್ ದೇವಸ್ವಂ ಬೋರ್ಡ್ ನೌಕರರ ನಿಯಂತ್ರಣ ನಿಯಮಗಳ ಪ್ರಕಾರ ನೇಮಕಾತಿಗಳನ್ನು ಮಾಡಲಾಗುತ್ತಿದೆ ಎಂದು ದೇವಸ್ವಂ ಮಂಡಳಿ ಅಧಿಕಾರಿಗಳು ಅಧಿಸೂಚನೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಇಲ್ಲಿ 2015 ಮತ್ತು 2016 ರಲ್ಲಿ ಮಾಡಿದ ಸಣ್ಣಪುಟ್ಟ ತಿದ್ದುಪಡಿಗಳನ್ನು ಹೊರತುಪಡಿಸಿ, ಇದುವರೆಗೆ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ.