ಚಂಡೀಗಢ: ಭಾರತ್ ಜೋಡೋ ಯಾತ್ರೆಯ ವೇಳೆ ಕೊರೆಯುವ ಚಳಿಯ ನಡುವೆಯೂ ತಾವು ಟೀ ಶರ್ಟ್ ಮಾತ್ರ ಧರಿಸುತ್ತಿರುವುದರ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿವೆ. ಆದರೆ ಈ ಬಗ್ಗೆ ಈಗ ಸ್ವತಃ ರಾಹುಲ್ ಗಾಂಧಿ ಅವರೇ ಮಾತನಾಡಿದ್ದು, ತಮ್ಮ ಟೀ ಶರ್ಟ್ ರಹಸ್ಯ ಬಿಚ್ಚಿಟ್ಟಿದ್ದಾರೆ. ಮಧ್ಯಪ್ರದೇಶದಲ್ಲಿ ಹರಿದ ಬಟ್ಟೆ ಧರಿಸಿ ಚಳಿಯಲ್ಲಿ ನಡುಗುತ್ತಿದ್ದ ಮೂವರು ಬಡ ಹುಡುಗಿಯರನ್ನು ಭೇಟಿಯಾದ ನಂತರ ತಾವು ಯಾತ್ರೆಯುದ್ದಕ್ಕೂ ಕೇವಲ ಟೀ ಶರ್ಟ್ ಧರಿಸಲು ನಿರ್ಧರಿಸಿದ್ದಾಗಿ ಅವರು ಬಹಿರಂಗಪಡಿಸಿದ್ದಾರೆ.
ಈ ಬಿಳಿ ಟಿ-ಶರ್ಟ್ ಅನ್ನು ಏಕೆ ಧರಿಸಿದ್ದೇನೆ ಎಂದು ಜನ ನನ್ನನ್ನು ಕೇಳುತ್ತಾರೆ. ನನಗೆ ಚಳಿಯಾಗುವುದಿಲ್ಲವೇ ಎಂದು ಪ್ರಶ್ನಿಸುತ್ತಾರೆ. ನಾನು ಇವಾಗ ಅದರ ಕಾರಣವನ್ನು ಹೇಳುತ್ತೇನೆ ಕೇಳಿ. ಕೇರಳದಲ್ಲಿ ಯಾತ್ರೆ ಪ್ರಾರಂಭವಾದಾಗ ವಾತಾವರಣ ಬೆಚ್ಚಗಿತ್ತು. ಆದರೆ ನಾವು ಮಧ್ಯಪ್ರದೇಶವನ್ನು ಪ್ರವೇಶಿಸಿದಾಗ ಸ್ವಲ್ಪ ಚಳಿ ಆರಂಭವಾಗಿತ್ತು. ಒಂದು ದಿನ ಹರಿದ ಬಟ್ಟೆಯಲ್ಲಿದ್ದ ಮೂವರು ಬಡ ಹೆಣ್ಣು ಮಕ್ಕಳು ನನ್ನ ಬಳಿಗೆ ಬಂದರು. ಸರಿಯಾದ ಬಟ್ಟೆಯನ್ನು ಧರಿಸದ ಆ ಮಕ್ಕಳು ಚಳಿಯಲ್ಲಿ ನಡುಗುತ್ತಿದ್ದವು. ನಾನೂ ಸಹ ಎಲ್ಲಿಯವರೆಗೆ ಚಳಿಯಲ್ಲಿ ನಡುಗುವುದಿಲ್ಲವೋ ಅಲ್ಲಿಯವರೆಗೆ ಟೀ ಶರ್ಟ್ ಮಾತ್ರ ಧರಿಸುತ್ತೇನೆ ಎಂದು ಆ ದಿನ ನಿರ್ಧಾರ ಮಾಡಿದೆ ಎಂದು ಹರಿಯಾಣದ ಅಂಬಾಲಾದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಹೇಳಿದರು.
ಈ ಮೂಲಕ ಆ ಹುಡುಗಿಯರಿಗೆ ಒಂದು ಸಂದೇಶ ನೀಡಲು ಬಯಸುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ಯಾವಾಗ ನಡುಗಲು ಶುರುವಾಗುತ್ತದೆಯೋ, ಆಗ ಸ್ವೆಟರ್ ಹಾಕಿಕೊಳ್ಳುವ ಯೋಚನೆ ಬರುತ್ತೆ, ಆ ಮೂವರು ಹುಡುಗಿಯರಿಗೆ ಒಂದು ಸಂದೇಶ ಕೊಡಲು ಇಚ್ಛಿಸುತ್ತೇನೆ. ನಿಮಗೆ ಚಳಿಯಾದರೆ ರಾಹುಲ್ ಗಾಂಧಿಗೂ ಚಳಿಯಾಗುತ್ತದೆ ಎಂದು ಹೇಳಿದ್ದಾರೆ.