ನವದೆಹಲಿ: ಪಂಜಾಬ್‌ನ ಮೊಹಾಲಿಯಲ್ಲಿರುವ ಚಂಡೀಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ಸ್ನಾನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎಂಬ ಸುದ್ದಿ ಮಹತ್ವದ ತಿರುವು ಪಡೆದುಕೊಂಡಿದೆ. ವಿದ್ಯಾರ್ಥಿನಿಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಎಂಬುದನ್ನು ಪೊಲೀಸರು ನಿರಾಕರಿಸಿದ್ದಾರೆ. ಆರೋಪಿ ವಿದ್ಯಾರ್ಥಿನಿ ತನ್ನ ವಿಡಿಯೋವನ್ನು ಮಾತ್ರ ಗೆಳೆಯನಿಗೆ ಕಳುಹಿಸಿದ್ದಾಳೆ. ಬೇರೆ ಯಾವ ವಿಡಿಯೋ ಕೂಡ ಹೊರಬಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಹುಡುಗಿಯರು ಸ್ನಾನ ಮಾಡುತ್ತಿರುವ ವೇಳೆ ಇನ್ನೊಬ್ಬ ವಿದ್ಯಾರ್ಥಿನಿ ಇದನ್ನು ವಿಡಿಯೋ ಮಾಡಿ ಆತನ ಸ್ನೇಹಿತರಿಗೆ ಕಳುಹಿಸಿದ್ದಾಳೆ ಎಂಬುದು ದೊಡ್ಡ ಪ್ರತಿಭಟನೆಗೆ ಕಾರಣವಾಗಿತ್ತು. ಬಳಿಕ ಆರೋಪಿ ವಿದ್ಯಾರ್ಥಿನಿಯನ್ನು ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರು, ಯಾವುದೇ ವಿಡಿಯೋವನ್ನು ಹುಡುಗಿ ಹರಿಬಿಟ್ಟಿಲ್ಲ. ಈ ಮೊದಲು ಕೇಳಿಬಂದ ಎಲ್ಲ ಆರೋಪಗಳು ಕೇವಲ ವದಂತಿ ಎಂದು ತಿಳಿಸಿದ್ದಾರೆ.
ಆರೋಪಿ ವಿದ್ಯಾರ್ಥಿನಿ ಹಿಮಾಚಲ ಪ್ರದೇಶದ ತನ್ನ ಗೆಳೆಯನಿಗೆ ತನ್ನದೇ ವಿಡಿಯೋವನ್ನು ಕಳುಹಿಸಿದ್ದಾಳೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ವಿದ್ಯಾರ್ಥಿಯನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಎಂದು ಮೊಹಾಲಿ ಎಸ್ಪಿ ವಿವೇಕ್ ಶೀಲ್ ಸೋನಿ ಮಾಹಿತಿ ನೀಡಿದರು.
ಆಕ್ಷೇಪಾರ್ಹ ವಿಡಿಯೋ ಸೋರಿಕೆಯಾದ ಸುದ್ದಿ ಕೇಳಿ ಬಂದ ನಂತರ ಕೆಲವು ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಮುಂದಾಗಿದ್ದರು ಎಂಬುದೂ ಸುಳ್ಳು. ಆರೋಪಿಯಿಂದ ವಿಡಿಯೋ ಪಡೆದುಕೊಂಡ ವ್ಯಕ್ತಿಯನ್ನು ಬಂಧಿಸಲು ಪೊಲೀಸ್ ತಂಡ ಶಿಮ್ಲಾಕ್ಕೆ ತೆರಳಿದೆ. ಇದುವರೆಗೆ ನಡೆಸಿದ ತನಿಖೆಯಲ್ಲಿ ಆರೋಪಿತೆ ಒಂದೇ ಒಂದು ವಿಡಿಯೋವನ್ನು ಕಳುಹಿಸಿದ್ದಾಳೆ. ಆಕೆ ಬೇರೆ ವಿದ್ಯಾರ್ಥಿನಿಯರ ವಿಡಿಯೋವನ್ನು ರೆಕಾರ್ಡ್ ಮಾಡಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಓದಿ: ಚಂಡೀಗಢ ವಿಶ್ವವಿದ್ಯಾಲಯದ ವಿಡಿಯೋ ವೈರಲ್ ಮಾಡಿದ ಯುವತಿ ಫ್ರೆಂಡ್ ಅರೆಸ್ಟ್
ವಿಶ್ವವಿದ್ಯಾನಿಲಯದಿಂದ ಹಲವು ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು, ಅವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಆಕ್ರೋಶಗೊಂಡ ವಿದ್ಯಾರ್ಥಿನಿಯರು ಕೂಗಾಡಿದ ವೇಳೆ ಕುಸಿದು ಬಿದ್ದಿದ್ದು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾರೂ ಆತ್ಮಹತ್ಯೆಗೆ ಯುತ್ನಿಸಿಲ್ಲ ಎಂದು ಪೊಲೀಸರು ವಿವರಿಸಿದ್ದಾರೆ.
60 ಎಂಎಂಎಸ್ ವಿಡಿಯೋಗಳು ನಿರಾಧಾರ:ವಿದ್ಯಾರ್ಥಿನಿಯರ 60 ಆಕ್ಷೇಪಾರ್ಹ ಎಂಎಂಎಸ್ ವಿಡಿಯೋಗಳು ಹೊರಬಂದಿವೆ ಎಂದು ಮಾಧ್ಯಮಗಳಲ್ಲಿ ಬಂದಿರುವ ಸುದ್ದಿ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತವಾಗಿದೆ. ವಿದ್ಯಾರ್ಥಿನಿ ತನ್ನ ಗೆಳೆಯನೊಂದಿಗೆ ಹಂಚಿಕೊಂಡ ವೈಯಕ್ತಿಕ ವಿಡಿಯೋ ಹೊರತುಪಡಿಸಿ ಬೇರೆ ಯಾವುದೇ ಆಕ್ಷೇಪಾರ್ಹ ವಿಡಿಯೋಗಳು ಲೀಕ್ ಆಗಿಲ್ಲ. ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ತನಿಖೆಯನ್ನು ಪೊಲೀಸ್ ಇಲಾಖೆಗೆ ವಹಿಸಲಾಗಿದೆ. ಜಪ್ತಿ ಮಾಡಲಾದ ಮೊಬೈಲ್ಗಳು ಮತ್ತು ಇತರೆ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಪೊಲೀಸರಿಗೆ ನೀಡಲಾಗಿದೆ ಎಂದು ಚಂಡೀಗಢ ವಿವಿ ಕುಲಪತಿ ಡಾ. ಆರ್.ಎಸ್. ಬಾವಾ ತಿಳಿಸಿದ್ದಾರೆ.