ಶಿಮ್ಲಾ:ಹಿಮಾಚಲ ಪ್ರದೇಶದಲ್ಲಿ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಇಲ್ಲೊಬ್ಬರು ಈ ನಡುವೆಯೇ ಆನ್ಲೈನ್ನಲ್ಲೇ ತಮ್ಮ ಮದುವೆ ಮುಗಿಸಿಕೊಂಡಿದ್ದಾರೆ. ಶಿಮ್ಲಾದ ಆಶಿಶ್ ಸಿಂಘಾ ಹಾಗೂ ಕುಲುವಿನ ಶಿವಾನಿ ಠಾಕೂರ್ ಆನ್‌ಲೈನ್‌ನಲ್ಲಿ ಮದುವೆಯಾದವರು. ಸದ್ಯ ಈ ಮದುವೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಹಿಮಾಚಲದಲ್ಲೊಂದು ವಿಶಿಷ್ಟ ಮದುವೆ: ಸದ್ಯಕ್ಕಿರುವ ಮಾಹಿತಿಯ ಪ್ರಕಾರ ಶಿಮ್ಲಾ ಜಿಲ್ಲೆಯ ಕೋಟ್‌ಗಢ ನಿವಾಸಿ ಆಶಿಶ್ ಸಿಂಘಾ ಮತ್ತು ಕುಲು ಜಿಲ್ಲೆಯ ಭುಂತರ್ ನಿವಾಸಿ ಶಿವಾನಿ ಅವರ ವಿವಾಹ ಜುಲೈ 10ರ ಸೋಮವಾರ ನಿಗದಿಯಾಗಿತ್ತು. ಆದರೆ, ಧಾರಾಕಾರ ಮಳೆಯಿಂದಾಗಿ ಎಲ್ಲರೂ ಮದುವೆ ಕ್ಯಾನ್ಸಲ್ ಆಗಬಹುದು ಎಂದೇ ಊಹಿಸಿದ್ದರು. ಆದರೆ ವಿಶೇಷ ಏನಪ್ಪಾ ಅಂದ್ರೆ ಇಷ್ಟೆಲ್ಲ ಮಳೆ, ಅವಾಂತರದ ನಡುವೆಯೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಜೋಡಿ ಆನ್‌ಲೈನ್‌ನಲ್ಲಿ ಮದುವೆ ಶಾಸ್ತ್ರ ಮುಗಿಸಿಕೊಂಡಿದ್ದು, ಈಗ ಭಾರಿ ಚರ್ಚೆಯಲ್ಲಿದೆ.
ಆನ್‌ಲೈನ್ ಮದುವೆ: ವಿಶೇಷವೆಂದರೆ ಈ ಮದುವೆಯಲ್ಲಿ ವಧು - ವರರು ಸಪ್ತಪದಿ ತುಳಿಯಲಿಲ್ಲ, ಹೋಮಕುಂಡದ ಸುತ್ತ ಸುತ್ತು ಹಾಕಿಲ್ಲ, ವಧುವಿನ ಹಣೆಗೆ ಮದುಮಗ ಕುಂಕುಮ ಇಟ್ಟಿಲ್ಲ. ಕೊಬೆಗೆ ವರ ವಧುವಿಗೆ ಮಂಗಳಸೂತ್ರವನ್ನೇ ಕಟ್ಟಿಲ್ಲ. ಆದರೂ ಇಬ್ಬರು ಗಂಡ ಹೆಂಡತಿಯಾಗಿದ್ದಾರೆ. ಹೇಗೆಂದರೆ ಈ ಮದುವೆ ಆನ್‌ಲೈನ್‌ನಲ್ಲಿ ನಡೆದಿದೆ. ಪುರೋಹಿತರು ವಿಡಿಯೋ ಕಾಲ್ ಮೂಲಕ ವಧು-ವರರನ್ನು ಪರಸ್ಪರ ಎದುರು ಕೂರುವಂತೆ ಮಾಡಿ ಮಂತ್ರ ಪಠಿಸಿ ಮದುವೆ ಮಾಡಿದ್ದಾರೆ. ಎಲ್ಲ ವಿಧಿವಿಧಾನಗಳನ್ನು ಆನ್‌ಲೈನ್‌ನಲ್ಲಿಯೇ ಮಾಡಲಾಗಿದೆ.