ನವದೆಹಲಿ:'ಕೌಶಲ್ಯದ ಆಟಗಳು' ಎಂಬ ಹೆಸರಿನಲ್ಲಿ ಜನರಿಂದ ಕೋಟಿಗಟ್ಟಲೆ ಹಣ ಸಂಪಾದಿಸಿ, ತೆರಿಗೆ ವಂಚಿಸುತ್ತಿರುವ ವಿವಿಧ ಆನ್‌ಲೈನ್ ಗೇಮಿಂಗ್ ಕಂಪನಿಗಳಿಗೆ ಇದುವರೆಗೂ 1 ಲಕ್ಷ ಕೋಟಿ ರೂಪಾಯಿ ಪಾವತಿಸಲು ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.
ತೆರಿಗೆ ವಂಚನೆಗಾಗಿ ಜಿಎಸ್‌ಟಿ ಅಧಿಕಾರಿಗಳು ಇದುವರೆಗೆ ಆನ್‌ಲೈನ್ ಗೇಮಿಂಗ್ ಕಂಪನಿಗಳಿಗೆ 1 ಲಕ್ಷ ಕೋಟಿ ರೂಪಾಯಿ ಪಾವತಿಸಲು ಎಚ್ಚರಿಕೆ ಪತ್ರ ರವಾನಿಸಿದ್ದಾರೆ. ಅಕ್ಟೋಬರ್ 1 ರಿಂದ ವಿದೇಶಿ ಗೇಮಿಂಗ್ ಕಂಪನಿಗಳು ಭಾರತದಲ್ಲಿ ನೋಂದಾಯಿಸಿದ ಯಾವುದೇ ದಾಖಲೆಗಳು ಇಲ್ಲ. ಸರ್ಕಾರ ಜಿಎಸ್‌ಟಿ ಕಾನೂನನ್ನು ತಿದ್ದುಪಡಿ ಮಾಡಿದೆ. ಸಾಗರೋತ್ತರ ಆನ್‌ಲೈನ್ ಗೇಮಿಂಗ್ ಕಂಪನಿಗಳು ಅಕ್ಟೋಬರ್ 1 ರಿಂದ ಭಾರತದಲ್ಲಿ ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ಹೇಳಿದರು.
ಆನ್‌ಲೈನ್ ಗೇಮಿಂಗ್ ವೇದಿಕೆಗಳಲ್ಲಿ ಕಟ್ಟಲಾದ ಪಂತದ ಮೌಲ್ಯದ ಪೈಕಿ 28 ಪ್ರತಿಶತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಲಾಗುವುದು ಎಂದು ಆಗಸ್ಟ್‌ನಲ್ಲಿ ಜಿಎಸ್‌ಟಿ ಕೌನ್ಸಿಲ್ ಸ್ಪಷ್ಟಪಡಿಸಿದೆ. ಅಲ್ಲಿಂದೀಚೆಗೆ, ಜಿಎಸ್‌ಟಿ ಕಟ್ಟಲು ಸೂಚಿಸಿ ಗೇಮಿಂಗ್ ಕಂಪನಿಗಳಿಗೆ ಶೋಕಾಸ್ ನೋಟಿಸ್ ಜಾರಿಯಾಗಿದೆ.
ಡ್ರೀಮ್-11 ಗೇಮಿಂಗ್ ಕಂಪನಿಗೆ 40,000 ಕೋಟಿ ರೂ.ಗಳ ವಂಚನೆ ಆರೋಪದ ಮೇಲೆ ಶೋಕಾಸ್ ನೋಟಿಸ್ ನೀಡಲಾಗಿದೆ. ಕ್ಯಾಸಿನೊ ಆಪರೇಟರ್‌ಗಳು ಮತ್ತು ಗೇಮಿಂಗ್ ಪ್ಲಾಟ್‌ಫಾರ್ಮ್ ಆದ ಡೆಲ್ಟಾ ಕಾರ್ಪೊಗೆ ಎರಡು ಕಂತುಗಳಲ್ಲಿ ಒಟ್ಟು 23,000 ಕೋಟಿ ರೂ. ಕಟ್ಟುವಂತೆ GST ಅಧಿಕಾರಿಗಳು ಸೂಚಿಸಿದ್ದಾರೆ.