ನವದೆಹಲಿ: ಕಳೆದ ಒಂದು ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೋರೇಷನ್ (ಒಎನ್ಜಿಸಿ) ದಾಖಲೆಯ 40,305 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಈ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಬಳಿಕ ಭಾರತದ ಎರಡನೇ ಅತಿ ಹೆಚ್ಚು ಲಾಭದಾಯಕ ಕಂಪನಿ ಎಂಬ ಹೆಗ್ಗಳಿಕೆ ಗಳಿಸಿದೆ.
ಕಳೆದ ವರ್ಷ ಒಎನ್ಜಿಸಿ ಕೇವಲ 11,246.44 ಕೋಟಿ ರೂ. ಲಾಭದಲ್ಲಿತ್ತು. ಆದರೆ, ತಾನು ಉತ್ಪಾದಿಸುವ ಕಚ್ಚಾ ತೈಲಕ್ಕೆ ಉತ್ತಮ ಬೆಲೆ ಬಂದ ಕಾರಣ 2021ರ ಏಪ್ರಿಲ್ನಿಂದ 2022ರ ಮಾರ್ಚ್ನ ಆರ್ಥಿಕ ವರ್ಷದಲ್ಲಿ ಶೇ.258ರಷ್ಟು ಲಾಭಾಂಶ ಹೆಚ್ಚಿಸಿಕೊಂಡು 40,305 ಕೋಟಿ ರೂ.ಗಳ ಪ್ರಗತಿ ಸಾಧಿಸಿದೆ. ಕಳೆದ ವರ್ಷ ಪ್ರತಿ ಬ್ಯಾರೆಲ್ ಕಚ್ಚಾ ತೈಲ ಉತ್ಪಾದನೆ ಮತ್ತು ಮಾರಾಟಕ್ಕೆ ಶೇ.42.78ರಷ್ಟು ನಿವ್ವಳ ಲಾಭ ಬಂದಿತ್ತು. ಆದರೆ, ಈ ವರ್ಷದಲ್ಲಿ ಪ್ರತಿ ಬ್ಯಾರೆಲ್‌ಗೆ ಶೇ.76.62ರಷ್ಟು ಲಾಭ ಗಳಿಸಿದೆ.
ಅಲ್ಲದೇ, ಅಂತಾರಾಷ್ಟ್ರೀಯ ತೈಲ ಬೆಲೆಯಲ್ಲೇ ಒಎನ್ಜಿಸಿ ಗಳಿಸಿದ ಅತ್ಯುತ್ತಮ ಲಾಭದ ಬೆಲೆ ಇದಾಗಿದೆ. ಇನ್ನು, ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಪರಿಣಾಮ 14 ವರ್ಷಗಳ ನಂತರ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 139 ಯುಎಸ್ ಡಾಲರ್ಗೆ ತಲುಪಿತ್ತು. ಅಚ್ಚರಿ ಎಂದರೆ 2008ರಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ದಾಖಲೆಯ 147 ಯುಎಸ್ ಡಾಲರ್ಗೆ ಮುಟ್ಟಿತ್ತು. ಆದರೆ, ಆಗ ಒಎನ್ಜಿಸಿ ತುಂಬಾ ಕೆಳಮಟ್ಟಕ್ಕೆ ಇಳಿದಿತ್ತು. ಯಾಕೆಂದರೆ, ಆಗ ವ್ಯಾಪಾರಿಗಳಿಗೆ ಸಬ್ಸಿಡಿ ದರದಲ್ಲಿ ಇಂಧನ ನೀಡಲಾಗಿತ್ತು. ಇದರಿಂದ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಸೀಮೆಎಣ್ಣೆಯನ್ನು ತನ್ನ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡಲಾಗಿದೆ.
ಇನ್ನು, ರಿಲಯನ್ಸ್ ಇಂಡಸ್ಟ್ರೀಸ್ ಇದೇ ಆರ್ಥಿಕ ವರ್ಷದಲ್ಲಿ 792,756 ಕೋಟಿ ರೂ. ಆದಾಯ ಗಳಿಸಿದ್ದು, ಇದರಲ್ಲಿ 67,845 ಕೋಟಿ ರೂ. ನಿವ್ವಳ ಲಾಭವನ್ನು ದಾಖಲಿಸಿದೆ.
ಇದನ್ನೂ ಓದಿ:ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರ