ಬಾರ್ಸಿಲೋನಾ :ಫೋಲ್ಡಬಲ್ ಫೋನ್‌ಗಳ ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚಾಗುತ್ತಿರುವಂತೆ, ಫೋಲ್ಡಬಲ್ ಫೋನ್‌ಗಳ ಮಾರುಕಟ್ಟೆಗೆ ಮತ್ತೊಂದು ಸ್ಮಾರ್ಟ್‌ಫೋನ್ ಕಂಪನಿ ಪ್ರವೇಶಿಸುತ್ತಿದೆ. ಪ್ರಸ್ತುತ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್- 2023 ರ ಸಂದರ್ಭದಲ್ಲಿ, ಜಾಗತಿಕ ತಂತ್ರಜ್ಞಾನ ಬ್ರ್ಯಾಂಡ್ OnePlus 2023 ರ ದ್ವಿತೀಯಾರ್ಧದಲ್ಲಿ ಫೋಲ್ಡಬಲ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತು.
ನಮ್ಮ ಮೊದಲ ಫೋಲ್ಡಬಲ್ ಫೋನ್, ಒನ್ ಪ್ಲಸ್ನ ವಿಶೇಷತೆಯಾದ ವೇಗ ಮತ್ತು ಸುಗಮ ಬಳಕೆಯ ಅನುಭವವನ್ನು ಹೊಂದಿರುತ್ತದೆ. ಇದು ತನ್ನ ವಿಶೇಷ ವಿನ್ಯಾಸ, ತಂತ್ರಜ್ಞಾನ ಮತ್ತು ಇತರ ಅಂಶಗಳಿಂದಾಗಿ ಪ್ರಮುಖ ಮಾದರಿಯ ಫೋಲ್ಡಬಲ್ ಫೋನ್ ಆಗಿರಬೇಕು ಎಂದು ಸಮಾರಂಭದಲ್ಲಿ ಒನ್ ಪ್ಲಸ್ ನ ಅಧ್ಯಕ್ಷ ಮತ್ತು ಸಿಒಒ ಕಿಂಡರ್ ಲಿಯು ಹೇಳಿದರು. ಪ್ರಸ್ತುತ, ಮಡಚಬಹುದಾದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್ ಪ್ರಾಬಲ್ಯ ಹೊಂದಿದೆ.
ಜಾಗತಿಕ ಫೋಲ್ಡಬಲ್ ಸ್ಮಾರ್ಟ್‌ಫೋನ್ ಉತ್ಪಾದನಾ ಸಂಖ್ಯೆಯು ಹಣಕಾಸು ವರ್ಷ 2023 ರಲ್ಲಿ ಶೇ 52 ರಷ್ಟು ಬೆಳವಣಿಗೆಯಾಗಿ (YoY) 22.7 ಮಿಲಿಯನ್ ಯುನಿಟ್‌ಗಳನ್ನು ತಲುಪುವ ನಿರೀಕ್ಷೆಯಿದೆ. ಮಾಧ್ಯಮ ಸಂಸ್ಥೆಯೊಂದರ ವರದಿಯ ಪ್ರಕಾರ ಮಾರುಕಟ್ಟೆಯಲ್ಲಿನ ಪ್ರಮುಖ ಕಂಪನಿಗಳಾದ ಸ್ಯಾಮ್‌ಸಂಗ್ ಮತ್ತು ಚೈನೀಸ್ ಮೂಲ ಉಪಕರಣ ತಯಾರಕರು (OEM ಗಳು) ವಿಶೇಷವಾಗಿ ಯುರೋಪ್ ಮತ್ತು ಚೀನಾದಲ್ಲಿ ತಮ್ಮ ಪ್ರಾಬಲ್ಯ ವೃದ್ಧಿಸಿಕೊಳ್ಳಲು ಬಯಸುತ್ತಿದ್ದಾರೆ. ಹಣಕಾಸು ವರ್ಷ 2022 ಕ್ಕೆ ಜಾಗತಿಕ ಫೋಲ್ಡಬಲ್ ಫೋನ್ ಉತ್ಪಾದನೆಗಳ ಸಂಖ್ಯೆ 14.9 ಮಿಲಿಯನ್ ಯುನಿಟ್ ಆಗಿತ್ತು. 2022 ರ ಮೊದಲ ತ್ರೈಮಾಸಿಕದಿಂದ ಮೂರನೇ ತ್ರೈಮಾಸಿಕದವರೆಗೆ ಸಂಚಿತ ಉತ್ಪಾದನಾ ಸಂಖ್ಯೆಯು ಶೇ 90 ರಷ್ಟು ಏರಿಕೆಯಾಗಿ 9.5 ಮಿಲಿಯನ್ ಯುನಿಟ್ ಆಗಿತ್ತು.