ಚಂಡೀಗಢ: ಪಂಜಾಬ್ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ (ಆಪ್) ಸರ್ಕಾರ ಅಧಿಕಾರಕ್ಕೆ ಬಂದು ಜಾರಿಗೊಳಿಸಿದ 300 ಯೂನಿಟ್ ಉಚಿತ ವಿದ್ಯುತ್ ಒದಗಿಸುವ ಯೋಜನೆಗೆ ಇದೀಗ ಒಂದು ವರ್ಷವಾಗುತ್ತಿದೆ. ವರ್ಷದಲ್ಲಿ ಶೇ 90ರಷ್ಟು ಕುಟುಂಬಗಳು ರಾಜ್ಯದಲ್ಲಿ ಶೂನ್ಯ ಬಿಲ್ ಪ್ರಯೋಜನ ಪಡೆದಿವೆ. ರೈತರಿಗೆ 8 ಗಂಟೆಗೂ ಹೆಚ್ಚು ಕಾಲ ಯಾವುದೇ ಕಡಿತವಿಲ್ಲದೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.
ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಉಚಿತ ವಿದ್ಯುತ್ ಖಾತರಿ ಯೋಜನೆ ಯಶಸ್ವಿಯಾಗಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ಯದ ಜನರಿಗೆ ಅಭಿನಂದನೆ ತಿಳಿಸಿದ್ದಾರೆ. ಈ ಕುರಿತು ಮಾತನಾಡಿ, " ಯೋಜನೆಯಿಂದ ಸಮಾಜದ ಪ್ರತಿಯೊಂದು ವರ್ಗಕ್ಕೂ ದೊಡ್ಡ ಲಾಭವಾಗಿದೆ. ಸರ್ಕಾರವು ಕಳೆದ ವರ್ಷ ಜುಲೈ 1ರಂದು ಜನರಿಗೆ ಉಚಿತ ವಿದ್ಯುತ್ ನೀಡುವ ಭರವಸೆಯನ್ನು ಜಾರಿಗೆ ತಂದಿದೆ. ಅಂದಿನಿಂದ ಇಂದಿನವರೆಗೆ ರಾಜ್ಯದಲ್ಲಿ ಶೇ.90ರಷ್ಟು ಮನೆಗಳಿಗೆ ಉಚಿತ ವಿದ್ಯುತ್ ಸಿಗುತ್ತಿದೆ. ಕಳೆದ ಜುಲೈನಿಂದ ವಿದ್ಯುತ್ ಬಿಲ್ ಶೂನ್ಯವಾಗಿದೆ" ಎಂದರು.
ರೈತರಿಗೆ 8 ಗಂಟೆಗೂ ಹೆಚ್ಚು ಕಾಲ ಯಾವುದೇ ಕಡಿತವಿಲ್ಲದೆ ನಿರಂತರ ವಿದ್ಯುತ್ ಪೂರೈಕೆಯಾಗುತ್ತಿದೆ. ರೈತರು ವೀಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತಿದ್ದಾರೆ. ಸರ್ಕಾರವು ಪಂಜಾಬ್ ರಾಜ್ಯ ವಿದ್ಯುತ್ ನಿಗಮಕ್ಕೆ 20,200 ಕೋಟಿ ರೂ. ಗಳ ಸಬ್ಸಿಡಿ ಸಹ ಪಾವತಿಸಿದೆ. ಹಿಂದಿನ ಸರ್ಕಾರಗಳಂತೆ ಸಾಲ ಪಡೆದು ಈ ಕ್ರಮ ಕೈಗೊಂಡಿಲ್ಲ. ಖಜಾನೆ ಲೂಟಿ, ಭ್ರಷ್ಟಾಚಾರ ತಡೆದು ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ವಿವರಿಸಿದರು.
ರಾಜ್ಯ ಸರ್ಕಾರದ ಸಂಘಟಿತ ಪ್ರಯತ್ನದಿಂದ 2015ರ ನಂತರ ಪಚ್ವಾರ ಕಲ್ಲಿದ್ದಲು ಗಣಿಯಿಂದ ಕಲ್ಲಿದ್ದಲು ಪೂರೈಕೆ ಪುನರಾರಂಭವಾಗಿದೆ. ಹಿಂದಿನ ಸರ್ಕಾರಗಳು ಖಾಸಗಿ ಥರ್ಮಲ್ ಪ್ಲಾಂಟ್ಗಳಿಂದ ಅಕ್ರಮವಾಗಿ ಹಣ ಕೀಳಲು ಗಣಿಗಳಿಂದ ಸರಬರಾಜು ನಿಲ್ಲಿಸಿದ್ದವು ಎಂದು ಭಗವಂತ ಮಾನ್ ಹೇಳಿದರು.