ರಜೌರಿ (ಜಮ್ಮು ಮತ್ತು ಕಾಶ್ಮೀರ):ರಜೌರಿ ಪ್ರದೇಶದಲ್ಲಿ ಇಂದು (ಶುಕ್ರವಾರ) ಬೆಳಗ್ಗೆಯಿಂದ ಭದ್ರತಾ ಪಡೆಗಳು ಮತ್ತು ಅಡಗಿ ಕುಳಿತ ಉಗ್ರರ ನಡುವೆ ಗುಂಡಿನ ದಾಳಿ ನಡೆಯುತ್ತಿದ್ದು, ಓರ್ವ ಉಗ್ರನನ್ನು ಸೇನೆ ಹೊಡೆದುರುಳಿಸಿದೆ. ಈ ಪ್ರದೇಶದಲ್ಲಿ ಎಷ್ಟು ಉಗ್ರರು ಅಡಗಿದ್ದಾರೆ ಎಂಬ ಬಗ್ಗೆ ತಿಳಿದುಬಂದಿಲ್ಲ. ಸದ್ಯ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ಮುಂದುವರಿಸಿವೆ. ಸ್ಥಳೀಯ ಪೊಲೀಸರು ಘಟನಾ ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಸೇನೆ ನೀಡಿದ ಮಾಹಿತಿ ಪ್ರಕಾರ, ರಜೌರಿ ಪ್ರದೇಶದ ದಸ್ಸಾಲ್ ಅರಣ್ಯದಲ್ಲಿ ಉಗ್ರರು ಇರುವ ಬಗ್ಗೆ ಭದ್ರತಾ ಪಡೆಗಳಿಗೆ ಸುಳಿವು ಸಿಕ್ಕಿದೆ. ಈ ಮಾಹಿತಿ ಆಧರಿಸಿ ಪ್ರದೇಶವನ್ನು ಸುತ್ತುವರಿದು ಶೋಧ ಆರಂಭಿಸಲಾಗಿತ್ತು. ಭದ್ರತಾ ಪಡೆಗಳು ಉಗ್ರರ ಅಡಗುತಾಣಗಳ ಬಳಿಗೆ ಬಂದಾಗ ಹೊಂಚು ಹಾಕಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಭದ್ರತಾ ಸಿಬ್ಬಂದಿ ಪ್ರತಿ ದಾಳಿ ನಡೆಸಿದ್ದಾರೆ.
ಉಗ್ರರು ಈ ಪ್ರದೇಶದಿಂದ ತಪ್ಪಿಸಿಕೊಳ್ಳದಂತೆ ಸೇನೆ ಕಟ್ಟೆಚ್ಚರ ವಹಿಸಿದೆ. ಎನ್‌ಕೌಂಟರ್ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಗಸ್ತು ಹೆಚ್ಚಿಸಿದ್ದಾರೆ. ದಟ್ಟ ಅರಣ್ಯ ಇರುವುದರಿಂದ ಶೋಧ ಕಾರ್ಯಕ್ಕೆ ತೊಂದರೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಉಗ್ರಗಾಮಿ ವಿರೋಧಿ ಕಾರ್ಯಾಚರಣೆಯ ಭಾಗವಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ತನಿಖಾ ಘಟಕವು ಉಗ್ರಗಾಮಿ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್‌ನ ಸಹಚರನ ಆಸ್ತಿಯನ್ನು ಗುರುವಾರ ವಶಪಡಿಸಿಕೊಂಡಿದೆ. ತನಿಖಾ ಸಂಸ್ಥೆಯು ಅನಂತನಾಗ್ ಜಿಲ್ಲೆಯ ದಾನೋತ್‌ಪುರ ಕೋಕರ್ನಾಗ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವನ್ನು ಜಪ್ತಿ ಮಾಡಿದೆ. ಈ ಆಸ್ತಿಯನ್ನು ದೇಶವಿರೋಧಿ ಉಗ್ರ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿತ್ತು ಎಂದು ತಿಳಿದುಬಂದಿದೆ.
ನಿನ್ನೆ ಮಧ್ಯರಾತ್ರಿ ಅಂತಾರಾಷ್ಟ್ರೀಯ ಗಡಿ ದಾಟಲು ಯತ್ನಿಸುತ್ತಿದ್ದ ಪಾಕಿಸ್ತಾನಿ ನುಸುಳುಕೋರನೊಬ್ಬನನ್ನು ಬಿಎಸ್‌ಎಫ್ ಸಿಬ್ಬಂದಿ ಗುಂಡಿಕ್ಕಿ ಕೊಂದಿದ್ದರು. ಗುಂಡಿನ ದಾಳಿಯ ನಂತರ ಸೇನಾ ಸಿಬ್ಬಂದಿ ಪಾಕಿಸ್ತಾನದ ರೇಂಜರ್‌ಗಳನ್ನು ಸಂಪರ್ಕಿಸಿದ್ದಾರೆ. ಆದರೆ ಅವರು ಮೃತದೇಹವನ್ನು ವಾಪಸ್ ಪಡೆಯಲು ನಿರಾಕರಿಸಿದ್ದಾರೆ. ಕಳೆದ 15 ದಿನಗಳಲ್ಲಿ ಇಲ್ಲಿ ಭದ್ರತಾ ಪಡೆಗಳು ಇಬ್ಬರು ನುಸುಳುಕೋರರನ್ನು ಮಟ್ಟಹಾಕಿವೆ.
ಸೇನಾ ವಾಹನದ ಮೇಲೆ ಗ್ರೆನೇಡ್ ದಾಳಿ: ಕಣಿವೆಯಲ್ಲಿ ಏಪ್ರಿಲ್ ತಿಂಗಳು ಸೇನಾ ವಾಹನದ ಮೇಲೆ ಉಗ್ರರು ಗ್ರೆನೇಡ್ ದಾಳಿ ಮಾಡಿ ರಕ್ತಪಾತ ಸೃಷ್ಟಿಸಿದ್ದರು. ಪೂಂಚ್ ಜಿಲ್ಲೆಯ ಭಟ ಧುರಿಯನ್ ಪ್ರದೇಶದ ಹೆದ್ದಾರಿಯಲ್ಲಿ ದಾಳಿ ನಡೆದಿತ್ತು. ಏಪ್ರಿಲ್ 20 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಭಿಂಬರ್ ಗಲಿಯಿಂದ ಸಾಂಗಿಯೋಟ್‌ಗೆ ಸೇನಾ ವಾಹನ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಏಕಾಏಕಿ ವಾಹನದ ಮೇಲೆ ಉಗ್ರರು ಎಸೆದ ಗ್ರೆನೇಡ್ನಿಂದ ಬೆಂಕಿ ಹೊತ್ತಿಕೊಂಡಿತ್ತು. ಐವರು ಯೋಧರು ಹುತಾತ್ಮರಾಗಿದ್ದರು ಎಂದು ಸೇನಾಧಿಕಾರಿಗಳು ತಿಳಿಸಿದ್ದರು.
ಘಟನೆಗೆ ಸಂಬಂಧಿಸಿದ ವಿಡಿಯೋ ಕೂಡ ಲಭ್ಯವಾಗಿತ್ತು. ಇದರಲ್ಲಿ ಯೋಧರ ಮೃತದೇಹಗಳು ವಾಹನದ ಪಕ್ಕದಲ್ಲಿಯೇ ಬಿದ್ದಿರುವುದು ಮತ್ತು ಸೇನಾ ಸಿಬ್ಬಂದಿ ಮತ್ತು ಸ್ಥಳೀಯರು ಬೆಂಕಿ ನಿಯಂತ್ರಿಸಲು ಪ್ರಯತ್ನಿಸುತ್ತಿರುವುದು ಸೆರೆಯಾಗಿತ್ತು. ಸೇನಾ ವಾಹನದ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಮುಸ್ಲಿಂ ಧರ್ಮಗುರು, ಓರ್ವ ಸರ್ಕಾರಿ ನೌಕರ ಮತ್ತು ಇತರೆ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಉಗ್ರಗಾಮಿಗಳೊಂದಿಗೆ ನಂಟು ಹೊಂದಿರುವ ಶಂಕೆಯ ಮೇಲೆ ಮರ್ಕಝ್ ಉಲ್ ಮಾರಿಫ್ ಎಂಬ ಮದರಸಾದ ಮೌಲ್ವಿ ಮಂಜೂರ್ ಎಂಬಾತನನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ:ಬಲೂಚಿಸ್ತಾನದಲ್ಲಿ ಉಗ್ರರ ದಾಳಿ: ಮೂವರು ಪಾಕ್ ಸೈನಿಕರ ಹತ್ಯೆ