ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಬಿನ್ನರ್ ಪ್ರದೇಶದಲ್ಲಿ ಶನಿವಾರ ರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಹತ್ಯೆಗೀಡಾದ ಉಗ್ರನನ್ನು ಬಾರಾಮುಲ್ಲಾದ ಪಟ್ಟಾನ್‌ನ ಇರ್ಷಾದ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ. ಈತ ಏಪ್ರಿಲ್ 2022 ರಿಂದ ಲಷ್ಕರ್-ಎ-ತೊಯ್ಬಾ ಜತೆ ಸಂಪರ್ಕ ಹೊಂದಿದ್ದ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.
1 ಎಕೆ 47 ರೈಫಲ್, 2 ಮ್ಯಾಗಜೀನ್‌ಗಳು ಮತ್ತು ಮದ್ದುಗುಂಡು ಸೇರಿ ಇತರೆ ವಿಧ್ವಂಸಕ ಸಾಮಗ್ರಿಗಳನ್ನು ಉಗ್ರನಿಂದ ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಒಂದು ಶ್ವಾನ ಪ್ರಾಣ ಕಳೆದುಕೊಂಡಿದೆ. ಭದ್ರತಾ ಪಡೆಯ ಮೂವರು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇಬ್ಬರು ಹೈಬ್ರಿಡ್ ಭಯೋತ್ಪಾದಕರ ಬಂಧನ:ಸೋಪೋರ್ನಲ್ಲಿ ಇಬ್ಬರು ಹೈಬ್ರಿಡ್ ಭಯೋತ್ಪಾದಕರನ್ನು ಸೇನೆ ಮತ್ತು ಕೇಂದ್ರಾಡಳಿತ ಪ್ರದೇಶದ ಪೊಲೀಸರು ಜಂಟಿಯಾಗಿ ಶೋಧ ನಡೆಸಿ ಭಾನುವಾರ ಬಂಧಿಸಿದ್ದಾರೆ. ತಾರಿಕ್ ಅಹ್ಮದ್ ವಾನಿ ಮತ್ತು ಇಶ್ಫಾಕ್ ಅಹ್ಮದ್ ವಾನಿ ಬಂಧಿತರು.