ಚೆನ್ನೈ:ತನ್ನ ಪ್ರೀತಿ ನಿರಾಕರಿಸಿದ ಯುವತಿ ಬೇರೆ ಮದುವೆಯಾಗಬಾರದು ಎಂದು ಯುವಕನೊಬ್ಬ ಕೇರಳ ಮೂಲದ ಯುವತಿಯ ಮೇಲೆ ಮದ್ಯದ ಬಾಟಲಿಯಿಂದ ಹಲ್ಲೆ ಮಾಡಿದ್ದಾನೆ. ಈ ಘಟನೆ ಚೆನ್ನೈನಲ್ಲಿ ನಡೆದಿದೆ. ಗಗನಸಖಿ ಓದುತ್ತಿರುವ ಸೋನು ಜೋಸೆಫ್ (20) ಹಲ್ಲೆಗೊಳಗಾಗಿದ್ದಾರೆ.
ಈಕೆ ಮೂರು ತಿಂಗಳ ಹಿಂದೆ ಇಂಟರ್ನ್‌ಶಿಪ್ ತರಬೇತಿಗಾಗಿ ಕಿಲ್ಪಾಕ್ ಪ್ರದೇಶದ ಖಾಸಗಿ ರೆಸ್ಟೋರೆಂಟ್‌ಗೆ ಸೇರಿದ್ದರು. ಈ ಸಂದರ್ಭದಲ್ಲಿ ನವೀನ್(25) ಎಂಬಾತನ ಪರಿಚಯವಾಗಿದೆ. ಆ ಪರಿಚಯ ಗೆಳೆತನಕ್ಕೂ ತಿರುಗಿತ್ತು. ಆದರೆ ನವೀನನಿಗೆ ಆ ಗೆಳೆತನದ ಭಾವನೆ ಪ್ರೀತಿಗೆ ತಿರುಗಿದೆ. ಇದನ್ನು ಸೋನು ಜೊತೆ ಹೇಳಿಕೊಂಡಾಗ ಆಕೆ ತಿರಸ್ಕರಿಸಿದ್ದಾಳೆ. ನವೆಂಬರ್ 14, 2022 ರ ರಾತ್ರಿ ಸೋನು ಜೋಸೆಫ್ ತನ್ನ ಕೆಲಸ ಮುಗಿಸಿದ ನಂತರ ಅಬುಬೆಲಸ್ ರೆಸ್ಟೋರೆಂಟ್ ಹಿಂದೆ ಹಾಸ್ಟೆಲ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು.
ಈ ಸಂದರ್ಭದಲ್ಲಿ ನವೀನ್ ಆಕೆಯನ್ನು ಅಡ್ಡಗಟ್ಟಿ ವಾಗ್ವಾದ ನಡೆಸಿದ್ದಾನೆ. ಆ ಕೋಪದಲ್ಲಿ ಮದ್ಯದ ಬಾಟಲಿಯಿಂದ ಸೋನು ಮುಖಕ್ಕೆ ಹೊಡೆದಿದ್ದು, ಆಕೆ ಪ್ರಜ್ಞೆ ತಪ್ಪಿ ರಸ್ತೆಯಲ್ಲಿ ಬಿದ್ದಿದ್ದಾಳೆ. ಈ ವೇಳೆ ಪುನಃ ನವೀನ್ ಬಾಟಲಿ ಒಡೆದು ಆಕೆಯ ಮುಖಕ್ಕೆ ಇರಿದಿದ್ದಲ್ಲದೆ, ತನ್ನ ಕೈಗಳಿಂದ ಸೋನು ಹೊಟ್ಟೆ ಹಾಗೂ ಕುತ್ತಿಗೆಗೆ ಹೊಡೆದಿದ್ದಾನೆ. ನೋವಿನಿಂದ ಸೋನು ಜೋಸೆಫ್ ಕಿರುಚಿಕೊಂಡಾಗ ಅಕ್ಕಪಕ್ಕದ ಜನರು ಸ್ಥಳಕ್ಕೆ ಬಂದಿದ್ದಾರೆ. ಇದನ್ನು ನೋಡಿದ ನವೀನ್ ಅಲ್ಲಿಂದ ಓಡಿ ಹೋಗಿದ್ದಾನೆ. ಆಗ ಜನರು ಆಕೆಯನ್ನು ರಕ್ಷಿಸಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆಯ ಮುಖ, ಕುತ್ತಿಗೆ ಮತ್ತು ಕೈಗಳಿಗೆ 25 ಹೊಲಿಗೆಗಳನ್ನು ಹಾಕಿ ಚಿಕಿತ್ಸೆ ನೀಡಲಾಗುತ್ತಿದೆ.