ಬೆಲೋನಿಯಾ (ದಕ್ಷಿಣ ತ್ರಿಪುರ):ದಕ್ಷಿಣ ತ್ರಿಪುರ ಜಿಲ್ಲೆಯ ಬೆಲೋನಿಯಾ ಉಪವಿಭಾಗದ ದೇವಿಪುರದ ಇಂಡೋ - ಬಾಂಗ್ಲಾ ಗಡಿಯಲ್ಲಿ ಗುಂಡು ತಗುಲಿ ಯುವಕನೊಬ್ಬ ಮೃತಪಟ್ಟಿದ್ದಾನೆ.
ಮೃತನನ್ನು ಜಶೀಮ್ ಮಿಯಾ ಎಂದು ಗುರುತಿಸಲಾಗಿದೆ. ಗಡಿಯಲ್ಲಿ ಬಿಎಸ್ಎಫ್ ಸೈನಿಕರು ಮತ್ತು ಈ ಯುವಕನ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಈ ವೇಳೆ, ಈ ಗಲಾಟೆ ತಾರಕಕ್ಕೇರಿ ಈ ಅನಾಹುತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಏನಿದು ಘಟನೆ?
ಜಶೀಮ್ ತಂದೆ ಖಲೀದ್ ಮಿಯಾ ಎಂಬುವರು ನಿತ್ಯದಂತೆ ಜಾನುವಾರುಗಳನ್ನು ಮೇಯಿಸಲು ಗಡಿ ಪಕ್ಕದಲ್ಲಿರುವ ತಮ್ಮ ಜಮೀನುಗಳಿಗೆ ಹೋಗಿದ್ದಾರೆ. ಈ ವೇಳೆ, ಹೊಸದಾಗಿ ನಿಯೋಜನೆಗೊಂಡಿದ್ದ ಯೋಧರು ಖಲೀದ್ರನ್ನು ಥಳಿಸಿದ್ದಾರಂತೆ. ತಕ್ಷಣವೇ ಎಚ್ಚೆತ್ತ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಇದರಿಂದ ಬಿಎಸ್ಎಫ್ ಸೈನಿಕರು ಖಲೀದ್ರನ್ನು ಬಿಟ್ಟು ಕಳುಹಿಸಿದ್ದಾರೆ. ಆದರೆ, ಈ ಸಂಬಂಧ ಯಾರೋಬ್ಬ ಬಿಎಸ್ಎಫ್ ಯೋಧರು ಈ ಬಗ್ಗೆ ಮಾಹಿತಿ ನೀಡಿಲ್ಲ.
ಇಂಡೋ-ಬಾಂಗ್ಲಾ ಗಡಿಯಲ್ಲಿ ಬಿಎಸ್ಎಪ್ ಗುಂಡಿಗೆ ಯುವಕ ಬಲಿ? ತಮ್ಮ ತಂದೆಗೆ ಥಳಿಸಿದ ವಿಷಯ ತಿಳಿದ ನಂತರ, ಘಟನೆಯ ಬಗ್ಗೆ ವಿಚಾರಿಸಲು ಜಶೀಮ್ ಕೋಪದಿಂದ ಮನೆಯಿಂದ ಹೊರ ಬಂದಿದ್ದಾನೆ. ಆದರೆ, ಈತನಿಗೆ ಗುಂಡು ತಗುಲಿದ ಸುದ್ದಿ ಮನೆಯವರಿಗೆ ಮುಟ್ಟಿದೆ. ಈತನನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಸ್ಥಳೀಯರು ಸ್ಥಳಕ್ಕೆ ಧಾವಿಸಿದಾಗ, ಬಿಎಸ್ಎಫ್ ಸಿಬ್ಬಂದಿ ಅವಕಾಶ ನೀಡಲಿಲ್ಲ ಎಂದು ತಿಳಿದುಬಂದಿದೆ. ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ, ನಂತರ ಚಿಕಿತ್ಸೆಗಾಗಿ ಬೆಲೋನಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ದುರದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಆಸ್ಪತ್ರೆಯ ಹಾಸಿಗೆಯಲ್ಲಿ ಜಶೀಮ್ ಸಾವಿಗೀಡಾಗಿದ್ದಾನೆ. ಘಟನೆ ಸಂಬಂಧ ಉದ್ವಿಘ್ನತೆ ಉಂಟಾಗಿದ್ದು, ಸ್ಥಳೀಯರು ರಸ್ತೆ ತಡೆ ನಡೆಸಿದ್ದಾರೆ. ಪೊಲೀಸರು ಮನವರಿಕೆ ಮಾಡಿಕೊಟ್ಟ ನಂತರ ರಸ್ತೆ ತಡೆ ನಿಲ್ಲಿಸಿದ್ದಾರೆ. ಇನ್ನು ಬಿಎಸ್ಎಫ್ ತನ್ನ ಮಗನನ್ನು ಕೊಂದಿದೆ. ಹೀಗಾಗಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪೋಷಕರು ಒತ್ತಾಯ ಮಾಡಿದ್ದಾರೆ.