ಕೇರಳ:ಕೊಚ್ಚಿಯ ಕಲಮಸ್ಸೆರಿ ಪ್ರದೇಶದಲ್ಲಿ ಭಾನುವಾರ ಬೆಳಗ್ಗೆ ನಡೆಯುತ್ತಿದ್ದ ಯೆಹೋವನ ಪ್ರಾರ್ಥನಾ ಸಭೆಯ ವೇಳೆ ಸಂಭವಿಸಿದ ಭೀಕರ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 2 ಕ್ಕೆ ಏರಿಕೆಯಾಗಿದೆ. 52 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ 30 ಮಂದಿಯನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.
ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಮೊದಲ ಸ್ಫೋಟ ಸಂಭವಿಸಿತು. ಒಂದು ಗಂಟೆ ಬಳಿಕ ಮತ್ತೆ ಸರಣಿ ಸ್ಫೋಟಗಳು ಸಂಭವಿಸಿದವು. ಗಾಯಾಳುಗಳಲ್ಲಿ 18 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ಮಗು ಸೇರಿದಂತೆ 6 ಮಂದಿ ಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಶೇ.90 ರಷ್ಟು ಸುಟ್ಟುಹೋಗಿದ್ದ ಮಹಿಳೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. ತ್ರಿಶೂರ್ ಮತ್ತು ಕೊಟ್ಟಾಯಂ ವೈದ್ಯಕೀಯ ಕಾಲೇಜುಗಳಿಂದ ಪ್ಲಾಸ್ಟಿಕ್ ಮತ್ತು ಸಾಮಾನ್ಯ ಶಸ್ತ್ರಚಿಕಿತ್ಸಕರ ತಂಡಗಳು ಕಲಮಸ್ಸೆರಿ ವೈದ್ಯಕೀಯ ಕಾಲೇಜಿಗೆ ಆಗಮಿಸಿವೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದರು.
ಅಧಿಕಾರಿಗಳ ಪ್ರಕಾರ, ಸ್ಫೋಟ ಸಂಭವಿಸಿದಾಗ 2,000ಕ್ಕೂ ಹೆಚ್ಚು ಜನರು ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದರು. ಗಾಜಾವನ್ನು ಇಸ್ರೇಲ್ ಮಿಲಿಟರಿ ಆಕ್ರಮಿಸಿಕೊಂಡ ಬಳಿಕ ಹಮಾಸ್‌ನ ಮಾಜಿ ಮುಖ್ಯಸ್ಥ ಖಲೀದ್ ಮಶಾಲ್ ಎಂಬಾತ ಪ್ಯಾಲೆಸ್ಟೈನ್ ಪರ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಒಂದು ದಿನದ ಬಳಿಕ ಈ ಘಟನೆ ನಡೆದಿದೆ.
ಶನಿವಾರದ ಪ್ರತಿಭಟನೆಯಲ್ಲಿ ಹಮಾಸ್ ನಾಯಕ ಭಾಗವಹಿಸಿರುವ ಬಗ್ಗೆ ಪ್ರತಿಕ್ರಿಯಿಸಿದ್ದ, ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ನೌರ್ ಗಿಲೋನ್, ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದರು. ಈ ಮೂಲಕ ಭಾರತದಲ್ಲಿ ಹಮಾಸ್ ಸಂಘಟನೆಯನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸುವಂತೆ ಹೇಳಿದ್ದರು.