ದೇಶದಲ್ಲಿ ತಿಂಗಳುಗಳ ಕಾಲ ಚುನಾವಣೆ ನಡೆಯುತ್ತಲೇ ಇರುತ್ತವೆ. ಇದರಿಂದ ಸಿಬ್ಬಂದಿ ಮೇಲೆ ಆಗುವ ಒತ್ತಡ ಹೇಳತೀರದು. ವೆಚ್ಚವೂ ವಿಪರೀತ. ಚುನಾವಣೆ ನೀತಿಸಂಹಿತೆ ಹೆಸರಿನಲ್ಲಿ ಈ ಅವಧಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೂ ತಡೆ ಉಂಟಾಗುತ್ತದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂದರೆ ಏಕ ಕಾಲದ ಚುನಾವಣೆ ಮಾತ್ರ.
2014ರಲ್ಲಿ ಅಧಿಕಾರಕ್ಕೆ ಬಂದ ಆರಂಭದ ದಿನಗಳಲ್ಲಿಯೇ ಪ್ರಧಾನಿ ಮೋದಿ ಅವರು, ಇಂತಹ ಚುನಾವಣೆ ಸುಧಾರಣೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದರು. ಒನ್ ನೇಷನ್, ಒನ್ ಎಲೆಕ್ಷನ್ ಈ ವಿಷಯದ ಬಗ್ಗೆ ಪಿಎಂ ನರೇಂದ್ರ ಮೋದಿ ತಮ್ಮ ಅಧಿಕಾರಾವಧಿಯಲ್ಲಿ ಮೂರನೇ ಬಾರಿಗೆ ಒತ್ತಿ ಹೇಳಿದ್ದಾರೆ. ಸಮಯ ಮತ್ತು ಹಣದ ಉಳಿತಾಯ ಇದರ ಪ್ರಮುಖ ಉದ್ದೇಶವಾಗಿದೆ.
ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ರಾಷ್ಟ್ರ, ಒಂದು ಚುನಾವಣೆ ಕೇವಲ ಚರ್ಚೆಯ ವಿಷಯವಲ್ಲ. ಆದರೆ, ಅದು ಭಾರತದ ಅವಶ್ಯಕತೆ ಎಂದು ಹೇಳಿದ್ದಾರೆ. ತಿಂಗಳಿಗೊಮ್ಮೆ ಭಾರತದಲ್ಲಿ ಎಲ್ಲೆಲ್ಲೋ ಚುನಾವಣೆ ನಡೆಯುತ್ತಿರುತ್ತೆ. ಇದರಿಂದ ಅಭಿವೃದ್ಧಿ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಒಟ್ಟಿಗೆ ನಡೆಸುವ ಬಗ್ಗೆ ದೇಶದಲ್ಲಿ ಸುದೀರ್ಘ ಚರ್ಚೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಇದಕ್ಕೆ ಬೆಂಬಲಿಸಿದ್ದಾರೆ.
ಚುನಾವಣಾ ಆಯೋಗ, ನೀತಿ ಆಯೋಗ, ಕಾನೂನು ಆಯೋಗ ಮತ್ತು ಸಂವಿಧಾನ ಪರಿಶೀಲನಾ ಆಯೋಗ ಈ ಬಗ್ಗೆ ಚರ್ಚಿಸಿವೆ. ಆದರೆ, ಕೆಲವು ರಾಜಕೀಯ ಪಕ್ಷಗಳು ಮಾತ್ರ ಇದರ ಪರವಾಗಿವೆ. ಹೆಚ್ಚಿನ ಪಕ್ಷಗಳು ಇದನ್ನು ವಿರೋಧಿಸುತ್ತಿವೆ.
ಇದು ಸ್ವಾತಂತ್ರ್ಯೋತ್ತರದ ಪರಿಕಲ್ಪನೆ:
1951 ರಿಂದ 1967ರವರೆಗೆ ಕೇಂದ್ರ ಮತ್ತು ರಾಜ್ಯಗಳ ಚುನಾವಣೆಗಳನ್ನು ಒಟ್ಟಿಗೆ ನಡೆಸುವ ವ್ಯವಸ್ಥೆ ಇತ್ತು. ಈ ಅವಧಿಯಲ್ಲಿ ಲೋಕಸಭಾ ಚುನಾವಣೆಯೊಂದಿಗೆ ರಾಜ್ಯ ಚುನಾವಣೆಗಳು ಪೂರ್ಣವಾಗಿ ಅಥವಾ ಭಾಗಶಃ ನಡೆದಿವೆ. 1951-52ರಲ್ಲಿ ಲೋಕಸಭಾ ಚುನಾವಣೆಯೊಂದಿಗೆ ಎಲ್ಲಾ ರಾಜ್ಯಗಳ ಚುನಾವಣೆಗಳು ನಡೆದವು. ಆದರೆ, ಕ್ರಮೇಣ ರಾಜ್ಯಗಳ ಮರುಸಂಘಟನೆ ಮತ್ತು ಸರ್ಕಾರಗಳ ವಿಸರ್ಜನೆಯಿಂದಾಗಿ ಆದೇಶವು ಹದಗೆಟ್ಟಿತು.
1968 ಮತ್ತು 1969ರಲ್ಲಿ ಕೆಲವು ಶಾಸಕಾಂಗ ಸಭೆಗಳ ವಿಸರ್ಜನೆಯಿಂದಾಗಿ ಏಕಕಾಲಕ್ಕೆ ಚುನಾವಣೆ ನಡೆಸುವ ವ್ಯವಸ್ಥೆಗೆ ಸಮಸ್ಯೆ ಎದುರಾಯಿತು. ವಾಸ್ತವವಾಗಿ ಲೋಕಸಭೆ ಡಿಸೆಂಬರ್ 1970ರಲ್ಲಿ ವಿಸರ್ಜಿಸಲ್ಪಟ್ಟಿತು. ಹೀಗಾಗಿ, ರಾಜ್ಯಸಭೆ ಮತ್ತು ಸಂಸತ್ತಿನ ಚುನಾವಣೆಗಳು ಪ್ರತ್ಯೇಕವಾಗಿ ನಡೆದಿವೆ. 1957ರಲ್ಲಿ ನಡೆದ ಲೋಕಸಭಾ ಚುನಾವಣೆಯೊಂದಿಗೆ ಕೇವಲ 76 ಪ್ರತಿಶತದಷ್ಟು ರಾಜ್ಯ ಚುನಾವಣೆಗಳು ನಡೆದರೆ, 1962 ಮತ್ತು 1967ರಲ್ಲಿ ಈ ಸಂಖ್ಯೆ 67 ಪ್ರತಿಶತಕ್ಕೆ ತಲುಪಿತು. 1970ರ ಹೊತ್ತಿಗೆ ಚುನಾವಣೆ ನಡೆಸುವ ಸಂಪ್ರದಾಯ ಕೊನೆಗೊಂಡಿತು.
ಮೊದಲು ಎಲ್.ಕೆ.ಅಡ್ವಾನಿ ಚರ್ಚೆಗೆ ಬಂದರು:
ಭಾರತೀಯ ಜನತಾ ಪಕ್ಷವು ಚುನಾವಣೆಯಲ್ಲಿ ಪ್ರಾಬಲ್ಯ ಸಾಧಿಸಲು ಪ್ರಾರಂಭಿಸಿದಾಗ, ಲೋಕಸಭೆ ಮತ್ತು ವಿಧಾನಸಭೆಗಳಿಗೆ ಒಟ್ಟಿಗೆ ಚುನಾವಣೆಗಳನ್ನು ನಡೆಸುವ ಚರ್ಚೆ ಮತ್ತೆ ಹುಟ್ಟಿಕೊಂಡಿತು. ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರು ದೇಶದಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರವುದಾಗಿ ಬಹಿರಂಗವಾಗಿ ಹೇಳಿದ್ದರು.
ಕಾನೂನು ಆಯೋಗದ ಶಿಫಾರಸು :
1999 ರಲ್ಲಿ ಅಂದಿನ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ, ಕಾನೂನು ಆಯೋಗವು ಈ ವಿಷಯದ ಬಗ್ಗೆ ವರದಿಯನ್ನು ಸಲ್ಲಿಸಿತು. ಆಯೋಗವು ತನ್ನ ಶಿಫಾರಸುಗಳಲ್ಲಿ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ, ಅದೇ ಸಮಯದಲ್ಲಿ ಮತ್ತೊಂದು ಪರ್ಯಾಯ ಸರ್ಕಾರದ ಪರವಾಗಿ ವಿಶ್ವಾಸದ ನಿರ್ಣಯವನ್ನು ಮಾಡುವುದು ಖಚಿತ ಎಂದು ಹೇಳಿದರು.
2015ರಲ್ಲಿ ಕಾನೂನು ಮತ್ತು ನ್ಯಾಯದ ಸಂಸದೀಯ ಸಮಿತಿಯು ಚುನಾವಣೆಯನ್ನು ಏಕಕಾಲದಲ್ಲಿ ನಡೆಸಲು ಶಿಫಾರಸು ಮಾಡಿತು. 2018ರಲ್ಲಿ ಕಾನೂನು ಆಯೋಗವು ಈ ವಿಷಯದ ಬಗ್ಗೆ ಸರ್ವಪಕ್ಷ ಸಭೆ ಕರೆದಿದ್ದು, ಈ ಸಭೆಯಲ್ಲಿ ಕೆಲವು ರಾಜಕೀಯ ಪಕ್ಷಗಳು ಈ ವ್ಯವಸ್ಥೆಯನ್ನು ಬೆಂಬಲಿಸಿದ್ರೆ ಮತ್ತೆ ಕೆಲವು ವಿರೋಧಿಸಿದವು. ಕೆಲವು ರಾಜಕೀಯ ಪಕ್ಷಗಳು ಈ ವಿಷಯದ ಬಗ್ಗೆ ತಟಸ್ಥವಾಗಿದ್ದವು.