ಕರ್ನಾಟಕ

karnataka

ETV Bharat / bharat

ಪಂಚ ರಾಜ್ಯಗಳಲ್ಲಿ ಸೋಲುವ ಆತಂಕದಿಂದ 'ಒಂದು ರಾಷ್ಟ್ರ, ಒಂದು ಚುನಾವಣೆ' ಪ್ರಸ್ತಾವನೆ: ಬಿಜೆಪಿ ವಿರುದ್ಧ ಕಾಂಗ್ರೆಸ್​ ವಾಗ್ದಾಳಿ - ಕಾಂಗ್ರೆಸ್​

ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 'ಒಂದು ರಾಷ್ಟ್ರ, ಒಂದು ಚುನಾವಣೆ' ಪ್ರಸ್ತಾವನೆ ಮುಂದಿಟ್ಟಿದೆ. ಗಟ್ಟಿಯಾಗುತ್ತಿರುವ ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟವು ಬಿಜೆಪಿಯನ್ನು ಆತಂತಕ್ಕೆ ದೂಡಿದೆ ಎಂದು ಕಾಂಗ್ರೆಸ್​ ನಾಯಕರು ಟೀಕಿಸಿದ್ದಾರೆ.

one-nation-one-poll-move-as-bjp-fears-losing-five-state-polls-worried-over-india-alliance-says-congress
ಬಿಜೆಪಿ ಸೋಲು ಆತಂಕದಿಂದ 'ಒಂದು ರಾಷ್ಟ್ರ, ಒಂದು ಚುನಾವಣೆ' ಪ್ರಸ್ತಾವನೆ: ಕಾಂಗ್ರೆಸ್​ ವಾಗ್ದಾಳಿ

By ETV Bharat Karnataka Team

Published : Sep 1, 2023, 6:28 PM IST

ನವದೆಹಲಿ:'ಒಂದು ರಾಷ್ಟ್ರ, ಒಂದು ಚುನಾವಣೆ' ಪ್ರಸ್ತಾವನೆಯನ್ನು ಮುಂದಿಟ್ಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಶುಕ್ರವಾರ ಕಟುವಾಗಿ ಟೀಕಿಸಿದೆ. ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಬಿಜೆಪಿಯ ಆತಂಕವನ್ನು ಇದು ಪ್ರತಿಬಿಂಬಿಸುತ್ತದೆ. ಜೊತೆಗೆ 'ಒಂದು ರಾಷ್ಟ್ರ, ಒಂದು ಚುನಾವಣೆ' ಪ್ರಸ್ತಾವನೆ ಸಂಕೀರ್ಣವಾಗಿದ್ದು, ಇದನ್ನು ಕಾರ್ಯಗತಗೊಳಿಸುವುದೇ ಸವಾಲು ಎಂದಿದೆ.

''ಮುಂಬರುವ ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ ಸೇರಿ ಐದು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಎಂಬ ಆತಂಕ ಆ ಪಕ್ಷದ ನಾಯಕರನ್ನು ಕಾಡಲು ಶುರುವಾಗಿದೆ. ಕಳೆದ ವರ್ಷ ಹಿಮಾಚಲ ಪ್ರದೇಶ ಹಾಗೂ ಈ ವರ್ಷ ಕರ್ನಾಟಕವನ್ನು ಬಿಜೆಪಿ ಕಳೆದುಕೊಂಡಿದೆ. ಮುಂಬರುವ ರಾಜ್ಯಗಳಲ್ಲಿನ ಸೋಲು ಕೂಡ 2024ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಬಿಜೆಪಿ ನಾಯಕರು ಭಯಪಡುತ್ತಿದ್ದಾರೆ. ಆದ್ದರಿಂದ, ಈ 'ಒಂದು ರಾಷ್ಟ್ರ, ಒಂದು ಚುನಾವಣೆ'ಯ ಮೊರೆ ಹೋಗುತ್ತಿದ್ದಾರೆ'' ಎಂದು ಕೇಂದ್ರ ಗೃಹ ವ್ಯವಹಾರಗಳ ಖಾತೆಯ ಮಾಜಿ ರಾಜ್ಯ ಸಚಿವ ಶಕೀಲ್ ಅಹ್ಮದ್ 'ಈಟಿವಿ ಭಾರತ್‌'ಗೆ ತಿಳಿಸಿದರು.

''ಪಂಚ ರಾಜ್ಯ ಚುನಾವಣೆಗಳು ಈ ವರ್ಷ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆಯು 2024ರ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಡೆಯಲಿದೆ. ವಿಧಾನಸಭೆಗಳನ್ನು ಅವಧಿಯನ್ನು ಕೆಲ ತಿಂಗಳ ಕಾಲ ವಿಸ್ತರಿಸುವ ಮೂಲಕ ಇದರ ಚುನಾವಣೆಗಳನ್ನು ಮುಂದೂಡಲು ಬಿಜೆಪಿ ತೀರ್ಮಾನಿಸಿರಬಹುದು ಎಂಬುದು ನನ್ನ ಊಹೆ. ಇದು ರಾಷ್ಟ್ರೀಯ (ಲೋಕಸಭೆ) ಚುನಾವಣೆಯೊಂದಿಗೆ ರಾಜ್ಯಗಳ ಚುನಾವಣೆಗಳನ್ನು ನಡೆಸಲು ಅನುವಾಗಲಿದೆ. ಮೋದಿ ಸರ್ಕಾರ ಲೋಕಸಭೆ ಚುನಾವಣೆಯನ್ನು ಮುನ್ನಡೆಸುವ ಅಪಾಯ ತೆಗೆದುಕೊಳ್ಳಲು ಹೋಗುತ್ತಿಲ್ಲ. ಬಿಜೆಪಿಯ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರು ಕೂಡ ತಮ್ಮ 'ಇಂಡಿಯಾ ಶೈನಿಂಗ್' ಅಭಿಯಾನದ ನಂತರ ಇದೇ ರೀತಿ ಮಾಡಿ 2004ರ ರಾಷ್ಟ್ರೀಯ ಚುನಾವಣೆಯಲ್ಲಿ ಸೋಲು ಕಂಡಿದ್ದರು'' ಎಂದು ಹೇಳಿದರು.

ಇದನ್ನೂ ಓದಿ:13 ಸದಸ್ಯರ 'ಇಂಡಿಯಾ' ಸಮನ್ವಯ ಸಮಿತಿ ರಚನೆ: ಲೋಕಸಭೆಗೆ ಜಂಟಿಯಾಗಿ ಸ್ಪರ್ಧಿಸುವ ನಿರ್ಣಯ

ಮುಂದುವರೆದು ಮಾತನಾಡಿದ ಅವರು, ''ಈ ಒಂದು ರಾಷ್ಟ್ರ, ಒಂದು ಚುನಾವಣೆ ಎಂಬ ಪ್ರಸ್ತಾವನೆಯೇ ಸಂಕೀರ್ಣತೆಯಿಂದ ಕೂಡಿದೆ. ಅದನ್ನು ಕಾರ್ಯರೂಪಕ್ಕೆ ತರುವುದು ಕೂಡ ಸವಾಲಿನದ್ದಾಗಿದೆ'' ಎಂದು ಅಭಿಪ್ರಾಯಪಟ್ಟರು. ''ಏಕರೂಪ ನಾಗರಿಕ ಸಂಹಿತೆಯ ಪ್ರಸ್ತಾವನೆಯಂತೆಯೇ ಇದು ಕೂಡ ಸಂಕೀರ್ಣ. ಮೊದಲನೆಯದಾಗಿ ಇದಕ್ಕೆ ಸಾಂವಿಧಾನಿಕ ತಿದ್ದುಪಡಿ ಅಗತ್ಯ. ಉಭಯ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಅಂಗೀಕರಿಸಬೇಕು. ಎರಡನೆಯದಾಗಿ ಕಳೆದ ವರ್ಷದಲ್ಲಿ ರಚನೆಯಾದ ಗುಜರಾತ್, ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಂತಹ ವಿಧಾನಸಭೆಗಳನ್ನು ಕೇಂದ್ರವು ಏನು ಮಾಡುತ್ತದೆ?, ಈ ವಿಧಾನಸಭೆಗಳು ಇನ್ನೂ ಪೂರ್ಣಾವಧಿ ಪೂರೈಸಬೇಕಾಗಿದೆ. ಈ ವಿಧಾನಸಭೆಗಳನ್ನು ವಿಸರ್ಜಿಸಲು ಹಾಗೂ ಹೊಸದಾಗಿ ಚುನಾವಣೆಗೆ ಹೋಗುವುದು ಅಷ್ಟು ಸುಲಭವೇ'' ಎಂದು ಅಹ್ಮದ್ ಪ್ರಶ್ನಿಸಿದರು.

ಇದೇ ವೇಳೆ, ಸೆ.18ರಿಂದ 22ರವರೆಗೆ ಕರೆದಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರ 'ಒಂದು ರಾಷ್ಟ್ರ, ಒಂದು ಚುನಾವಣೆ' ಮಸೂದೆ ಮಂಡನೆಗೆ ಪ್ರಯತ್ನಿಸಬಹುದೇ ಎಂಬ ಕುರಿತು ಪ್ರತಿಕ್ರಿಯಿಸಿದ ಅವರು, ''ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯನ್ನು ಇದೀಗ ಪ್ರಕಟಿಸಲಾಗಿದೆ. ಕರಡು ಮಸೂದೆ ಸಿದ್ಧಪಡಿಸುವುದು ತುಂಬಾ ಸಮಯ ತೆಗೆದುಕೊಳ್ಳುವ ಕಸರತ್ತು. ಇದನ್ನು ಅಲ್ಪಾವಧಿಯಲ್ಲಿ ಮಾಡಲು ಸಾಧ್ಯವಿಲ್ಲ'' ಎಂದರು.

ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ವಿವೇಕ್ ಟಂಖಾ ಪ್ರತಿಕ್ರಿಯಿಸಿ, ''ಸಂಸತ್ತಿನ ವಿಶೇಷ ಅಧಿವೇಶನದ ಕಾರ್ಯಸೂಚಿ ಇನ್ನೂ ಗೊತ್ತಾಗಿಲ್ಲ. ಇದರ ನಡುವೆ ಈ ಹೊಸ ಪ್ರಸ್ತಾವ ಬಂದಿರುವುದು ಊಹಾಪೋಹಗಳಿಗೆ ಉತ್ತೇಜನ ನೀಡುತ್ತಿದೆ. ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳನ್ನು ತಪ್ಪಿಸಲು 'ಒಂದು ರಾಷ್ಟ್ರ, ಒಂದು ಚುನಾವಣೆ' ಮಸೂದೆ ಅಂಗೀಕರಿಸುವ ಉದ್ದೇಶವನ್ನೇ ಏನಾದರೂ ಹೊಂದಿದ್ದರೆ, ಬಿಜೆಪಿ ನಿಜವಾಗಿಯೂ ಕೆಟ್ಟ ಸ್ಥಿತಿಯಲ್ಲಿದೆ ಎಂದರ್ಥ. ಗಟ್ಟಿಯಾಗುತ್ತಿರುವ ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟವು ಬಿಜೆಪಿಯನ್ನು ಆತಂತಕ್ಕೆ ದೂಡಿದೆ'' ಎಂದು ಹೇಳಿದರು.

ಇದನ್ನೂ ಓದಿ:ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ಅವಲೋಕಿಸಲು ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ಸಮಿತಿ ರಚನೆ

ABOUT THE AUTHOR

...view details