ನವದೆಹಲಿ: 'ಒಂದು ರಾಷ್ಟ್ರ, ಒಂದು ಚುನಾವಣೆ' ಕುರಿತ ಉನ್ನತ ಮಟ್ಟದ ಸಮಿತಿಯನ್ನು ರಚಿಸಿರುವ ಸಮಯವು ಅತ್ಯಂತ ಅನುಮಾನಾಸ್ಪದವಾಗಿದೆ ಮತ್ತು ಅದರ ಉಲ್ಲೇಖದ ನಿಯಮಗಳು ಅದು ಏನು ಶಿಫಾರಸು ಮಾಡಬೇಕೆಂಬುದನ್ನು ಈಗಾಗಲೇ ನಿರ್ಧರಿಸಿದಂತಿವೆ ಎಂದು ಕಾಂಗ್ರೆಸ್ ರವಿವಾರ ಹೇಳಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, ಸಮಿತಿಯನ್ನು ಸಂಪೂರ್ಣ ಬೇಕಾಬಿಟ್ಟಿಯಾಗಿ ರಚಿಸಲಾಗಿದೆ ಮತ್ತು ಅದಕ್ಕಾಗಿಯೇ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಸಮಿತಿಯ ಭಾಗವಾಗಲು ನಿರಾಕರಿಸಿದ್ದಾರೆ ಎಂದು ಹೇಳಿದರು.
"ಒಂದು ರಾಷ್ಟ್ರ ಒಂದು ಚುನಾವಣೆ" ಎಂದು ಕರೆಯಲ್ಪಡುವ ಉನ್ನತ ಮಟ್ಟದ ಸಮಿತಿಯ ರಚನೆಯು ಯಾವುದೋ ಸಾಂಪ್ರದಾಯಿಕ ಕೆಲಸದಂತಾಗಿದ್ದು, ಅದನ್ನು ರಚಿಸಿರುವ ಸಮಯ ಸಂಶಯಾಸ್ಪದವಾಗಿದೆ. ಅದರ ಉಲ್ಲೇಖದ ನಿಯಮಗಳು ಈಗಾಗಲೇ ಅದರ ಶಿಫಾರಸುಗಳನ್ನು ನಿರ್ಧರಿಸಿವೆ" ಎಂದು ಜೈರಾಮ್ ರಮೇಶ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ ಸಾಧ್ಯತೆಯನ್ನು ಪರಿಶೀಲಿಸಲು ಕೇಂದ್ರವು ಘೋಷಿಸಿದ ಸಮಿತಿಯ ಭಾಗವಾಗಲು ಚೌಧರಿ ಶನಿವಾರ ನಿರಾಕರಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಚೌಧರಿ, ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಉನ್ನತ ಮಟ್ಟದ ಸಮಿತಿಯ ಸದಸ್ಯರಾಗಿ ತಮ್ಮನ್ನು ನೇಮಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಸಮಿತಿಯ ತೀರ್ಮಾನಗಳು ಹೀಗೆಯೇ ಬರಬೇಕು ಎಂಬ ರೀತಿಯಲ್ಲಿ ಅದರ ಉಲ್ಲೇಖದ ನಿಯಮಗಳನ್ನು ಸಿದ್ಧಪಡಿಸಲಾಗಿದೆ. ಇದೊಂದು ಕಣ್ಣೊರೆಸುವ ತಂತ್ರವಾಗಿದ್ದು, ಈ ಸಮಿತಿಯ ಭಾಗವಾಗಲು ನಿರಾಕರಿಸುತ್ತಿದ್ದೇನೆ ಎಂಬುದನ್ನು ತಿಳಿಸಲು ನನಗೆ ಯಾವ ಹಿಂಜರಿಕೆಯೂ ಇಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.