ಚೆನ್ನೈ: ಇಲ್ಲಿನ ಕೊಟ್ಟೂರುಪುರಂ ಪ್ರದೇಶದ ಮದ್ರಾಸ್ ಐಐಟಿಯಲ್ಲಿ ಎರಡನೇ ವರ್ಷದ ಬಿಟೆಕ್ ವ್ಯಾಸಂಗ ಮಾಡುತ್ತಿದ್ದ ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚೌಗುಲೆ ಕೇದಾರ್ ಸುರೇಶ್(21) ಮೃತ ವಿದ್ಯಾರ್ಥಿ.
ಐಐಟಿ ಕ್ಯಾಂಪಸ್ನಲ್ಲಿನ ಕಾವೇರಿ ಹಾಸ್ಟೆಲ್‌ನಲ್ಲಿ ತಾನು ವಾಸವಿದ್ದ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಆತನ ಜೊತೆಗಿದ್ದ ವಿದ್ಯಾರ್ಥಿಗಳು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಕೊಟ್ಟೂರುಪುರಂ ಪೊಲೀಸರು, ವಿದ್ಯಾರ್ಥಿಯ ಮೃತದೇಹವನ್ನು ರಾಯಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಕೊಟ್ಟೂರುಪುರಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರೇಮ ವೈಫಲ್ಯದಿಂದಾಗಿ ಕಳೆದ ಕೆಲ ದಿನಗಳಿಂದ ವಿದ್ಯಾರ್ಥಿ ಖಿನ್ನತೆಗೆ ಒಳಗಾಗಿದ್ದ ಎಂದು ತಿಳಿದುಬಂದಿದೆ. ಮೃತ ಚೌಗುಲೆ ಕೇದಾರ್ ಸುರೇಶ್ ಕೊಲ್ಹಾಪುರ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದು, ಪ್ರೇಮಿಗಳ ನಡುವಿನ ಭಿನ್ನಾಭಿಪ್ರಾಯ ಉಂಟಾಗಿ ಕೆಲವು ತಿಂಗಳ ಹಿಂದೆ ಯುವತಿಯು ಸುರೇಶ್ನೊಂದಿಗಿನ ಸಂಬಂಧವನ್ನು ಮುರಿದುಕೊಂಡಿದ್ದಳು ಎನ್ನಲಾಗಿದೆ. ಇದರಿಂದ ಮಾನಸಿಕವಾಗಿ ನೊಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಜೊತೆಗೆ, ವಿದ್ಯಾರ್ಥಿ ಆತ್ಮಹತ್ಯೆಗೆ ಬೇರೇನಾದರೂ ಕಾರಣವಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ :ಹಾಸ್ಟೆಲ್‌ನಲ್ಲಿ ಬಿ ಇ ವಿದ್ಯಾರ್ಥಿ ಆತ್ಮಹತ್ಯೆ.. ಆಘಾತದಿಂದ ವಾರ್ಡನ್ ಸಾವು