ಸೋನಿಪತ್ (ಹರಿಯಾಣ):ದೆಹಲಿ - ಹರಿಯಾಣ ಗಡಿ ಭಾಗವಾದ ಸಿಂಘು ಗಡಿಯಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಮತ್ತೊಬ್ಬ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ನಿರಂಜನ್ ಸಿಂಗ್, ಆತ್ಮಹತ್ಯೆಗೆ ಯತ್ನಿಸಿದ ರೈತನಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರವು ಈ ಕಾನೂನನ್ನು ತ್ಯಾಗವಿಲ್ಲದೇ ಹಿಂತೆಗೆದುಕೊಳ್ಳುವುದಿಲ್ಲ. ತ್ಯಾಗ ಮಾಡದೇ ಯುದ್ಧವನ್ನು ಗೆಲ್ಲಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾನು ಈ ನಿರ್ಧಾರಕ್ಕೆ ಬಂದೆ ಎಂದು ನಿರಂಜನ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.
ನಿನ್ನೆಯಷ್ಟೇ ಸಿಂಘು ಗಡಿಯಿಂದ ಮನೆಗೆ ಮರಳಿದ ಪಂಜಾಬ್ ಮೂಲದ ರೈತ ವಿಷ ಕುಡಿದು ಸಾವನ್ನಪ್ಪಿದ್ದರು. ಡಿ.16 ರಂದು 65 ವರ್ಷದ ರೈತನೋರ್ವ ಸಿಂಘು ಗಡಿಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದನ್ನೂ ಓದಿ: ಸಿಂಘು ಗಡಿಯಿಂದ ಮನೆಗೆ ಮರಳಿದ ಯುವ ರೈತ ವಿಷ ಸೇವಿಸಿ ಆತ್ಮಹತ್ಯೆ
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಸಿಂಘು, ಟಿಕ್ರಿ ಸೇರಿದಂತೆ ದೆಹಲಿಯ ಗಡಿಗಳಲ್ಲಿ ಪಂಜಾಬ್ ಹಾಗೂ ಹರಿಯಾಣ ರೈತರು ಕಳೆದ 24 ದಿನಗಳಿಂದ 'ದೆಹಲಿ ಚಲೋ' ಪ್ರತಿಭಟನೆ ನಡೆಸುತ್ತಿದ್ದಾರೆ. ಗಡಿಭಾಗಗಳಲ್ಲೇ ರೈತರನ್ನು ದೆಹಲಿ ಪ್ರವೇಶಿಸದಂತೆ ತಡೆಯಲಾಗುತ್ತಿದೆ. ಪಟ್ಟುಬಿಡದ ರೈತರು ಬಿಸಿಲು-ಚಳಿ ಎನ್ನದೇ ಹಗಲು-ರಾತ್ರಿ ಧರಣಿ ಮುಂದುವರೆಸಿದ್ದಾರೆ.