ಗುವಾಹಟಿ:ಅಲ್ ಖೈದಾ ಉಗ್ರ ಸಂಘಟನೆ ರಾಜ್ಯದಲ್ಲಿ ತನ್ನ ನೆಲೆ ಸ್ಥಾಪಿಸಲು ಪ್ರಯತ್ನಿಸುತ್ತಿದೆ ಎಂದು ಅಸ್ಸಾಂ ಪೊಲೀಸ್ ಮಹಾನಿರ್ದೇಶಕರು ಹೇಳಿಕೆ ಇತ್ತೀಚೆಗೆ ನೀಡಿದ್ದರು. ಇದೀಗ ಗೋಲ್ಪಾರಾ ಪೊಲೀಸರು ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಎರಡು ದಿನಗಳ ಹಿಂದೆ ಮಫ್ತಿ ಹಫೀಜುರ್ ರೆಹಮಾನ್ ಎಂಬಾತನನ್ನು ವಿಚಾರಣೆಗಾಗಿ ಪೊಲೀಸರು ಕರೆದೊಯ್ದಿದ್ದರು. ಆತ ಅಲ್ ಖೈದಾ ಜೊತೆಗಿನ ಸಂಬಂಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮುಫ್ತಿ ಹಫೀಜುರ್ ರೆಹಮಾನ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇಸ್ಲಾಮಿಕ್ ಮೂಲಭೂತವಾದಿಗಳೊಂದಿಗೆ ಅನುಮಾನಾಸ್ಪದ ಸಂಪರ್ಕಕ್ಕಾಗಿ ಗೋಲ್ಪಾರಾ ಪೊಲೀಸರು ಕಳೆದೊಂದು ವಾರದಲ್ಲಿ 4 ಜನರನ್ನು ಬಂಧಿಸಿದ್ದರು. ಮತ್ತೊಂದೆಡೆ, ಮೊರಿಗಾಂವ್ ಜಿಲ್ಲೆಯಲ್ಲಿ ಇಸ್ಲಾಮಿಕ್ ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ.
ಇದನ್ನೂ ಓದಿ:ಎಐಸಿಸಿಯಲ್ಲಿ ದುಷ್ಟರ ಕೂಟ, ರಿಮೋಟ್ ಕಂಟ್ರೋಲ್ ಆಡಳಿತ: ಗುಲಾಂ ನಬಿ ಆಜಾದ್