ನಾಗಪಟ್ಟಿಣಂ: ಜ್ಞಾನವೇಲ್ ನಿರ್ದೇಶನ ಮತ್ತು ಜ್ಯೋತಿಕಾ ಮತ್ತು ಸೂರ್ಯ (suriya )ನಿರ್ಮಿಸಿರುವ ಸೂರ್ಯ ಅಭಿನಯದ "ಜೈ ಭೀಮ್" (Jai bhim) ಅಮೆಜಾನ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಿ ದೇಶದಲ್ಲಷ್ಟೇ ಅಲ್ಲದೆ ವಿದೇಶದಲ್ಲೂ ಭಾರೀ ಸದ್ದು ಮಾಡಿದೆ.
ಚಿತ್ರ ಆರಂಭ ಆದಾಗಿನಿಂದ ಒಂದಲ್ಲಾ ಒಂದು ವಿವಾದಗಳು ಸುದ್ದಿಯಾಗುತ್ತಿವೆ. ಈಗ ಚಿತ್ರದ ಖಳನಾಯಕನ ಪಾತ್ರಕ್ಕೆ ಪಿಎಂಕೆ ನಾಯಕ ದಿವಂಗತ "ಕಾಡುವೆಟ್ಟಿ ಗುರು" ಹೆಸರಿಡಲಾಗಿದೆ ಎಂಬ ವಿವಾದ ಹುಟ್ಟಿಕೊಂಡಿದೆ.
ಪಿಎಂಕೆ ಜಿಲ್ಲಾ ಕಾರ್ಯದರ್ಶಿಯ ವಿವಾದಾತ್ಮಕ ಘೋಷಣೆ ಈ ಸಂಬಂಧ ಪಿಎಂಕೆ ಜಿಲ್ಲಾ ಕಾರ್ಯದರ್ಶಿ ಸೀತಮಲ್ಲೀ ಪಝನಿ ಸಾಮಿ ಅವರು ತಮ್ಮ ಪಕ್ಷದ ಸದಸ್ಯರೊಂದಿಗೆ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರ ಮೇಲೆ ಕ್ರಮ ಕೈಗೊಳ್ಳುವಂತೆ ಮೈಲಾಡುತುರೈ ಪೊಲೀಸ್ ವರಿಷ್ಠಾಧಿಕಾರಿ ಸುಗುಣಾ ಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಉದ್ದೇಶಪೂರ್ವಕವಾಗಿ ಪಿಎಂಕೆ ನಾಯಕ ಕಾಡುವೆಟ್ಟಿ ಅವರ ಹೆಸರಿಡಲಾಗಿದೆ. ಅವರು ವನ್ನಿಯರ್ ಜಾತಿಯ(vanniyar ) ಗುರುತನ್ನು ನಕಾರಾತ್ಮಕ ಪಾತ್ರದ ಹಿನ್ನೆಲೆಯಾಗಿ ಬಿಂಬಿಸಿದ್ದಾರೆ.
ಇದು ವನ್ನಿಯರ್ ಮತ್ತು ಇತರ ಜಾತಿಗಳ ಜನರ ನಡುವಿನ ಸಾಮರಸ್ಯ ಹಾಳಾಗುವಂತೆ ಮಾಡುತ್ತದೆ. ಆದ್ದರಿಂದ ನಟ ಸೂರ್ಯ, ತಾ.ಸೇ.ಜ್ಞಾನವೇಲ್ ಮತ್ತು ಜ್ಯೋತಿಕಾ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಇದರ ಬೆನ್ನಲ್ಲೇ ಸೂರ್ಯ ನಟಿಸಿದ "vel" ಚಿತ್ರವು ಮೈಲಾಡುತುರೈ ಥಿಯೇಟರ್‌ನಲ್ಲಿ ಮರು ಪ್ರದರ್ಶನಗೊಂಡಿದ್ದು, ಪಿಎಂಕೆ ಪಕ್ಷದ ಸದಸ್ಯರು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿ ಪ್ರದರ್ಶನಗಳನ್ನು ನಿಲ್ಲಿಸಿದ್ದಾರೆ.
ಮಾಯಿಲಾಡುತುರೈ ಪಿಎಂಕೆ ಕಾರ್ಯದರ್ಶಿ ಪಝನಿ ಸಾಮಿ ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದು, ಜಾತಿ ಗಲಭೆ ಹೆಚ್ಚಿಸುವ ಸಲುವಾಗಿ ಸೂರ್ಯ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ವನ್ನಿಯಾರ್ ಜಾತಿಯ ಜನರನ್ನು ನಾಚಿಸುವಂತೆ ಮಾಡಿದ ನಟ ಸೂರ್ಯ ಮೇಲೆ ಹಲ್ಲೆ ಮಾಡಿದವರಿಗೆ 1 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು ಮತ್ತು ಈ ಜಿಲ್ಲೆಯಲ್ಲಿ ಸೂರ್ಯನ ಯಾವುದೇ ಚಿತ್ರ ಪ್ರದರ್ಶನಗೊಳ್ಳುವುದಿಲ್ಲ ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಜೈಭೀಮ್ ಚಿತ್ರ ತಮಿಳುನಾಡಿನಲ್ಲಷ್ಟೇ ಅಲ್ಲದೆ ಭಾರತದಾದ್ಯಂತ ಭಾರೀ ಮೆಚ್ಚುಗೆ ಪಡೆದಿದೆ. ಹಾಗೆ ಹಲವಾರು ಖ್ಯಾತ ಸಿನಿಮಾ ವಿಮರ್ಶಕರು ಈ ಚಿತ್ರವನ್ನು ಹಾಡಿ ಹೊಗಳಿದ್ದಾರೆ.