ಚೈಬಾಸಾ (ಜಾರ್ಖಂಡ್): ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ನಡುವೆ ಗಲಾಟೆ ನಡೆದು ರೈಲಿನಿಂದ ಇಬ್ಬರನ್ನು ಹೊರಗೆಸೆದ ಘಟನೆ ಜಾರ್ಖಂಡ್ನ ಚೈಬಾಸಾ ಎಂಬಲ್ಲಿ ನಡೆದಿದೆ. ಭಾನುವಾರ ಮಧ್ಯಾಹ್ನ ತಿತ್ಲಗಢ ಹೌರಾ ಇಸ್ಪತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದ್ದು, ಈ ವೇಳೆ ಓರ್ವ ಮೃತಪಟ್ಟಿದ್ದರೆ ಮತ್ತೋರ್ವನ ತಲೆಗೆ ಗಂಭೀರ ಗಾಯವಾಗಿದೆ. ಚಕ್ರಧರಪುರ ಮತ್ತು ಲೋಟಾ ಪಹಾರ್ ರೈಲು ನಿಲ್ದಾಣಗಳ ನಡುವಿನ ಮುರ್ಹತು ಗ್ರಾಮದ ಬಳಿ ಈ ಪ್ರಕರಣ ನಡೆದಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಇಲ್ಲಿನ ತಿತ್ಲಗಢ ಹೌರಾ ಇಸ್ಪತ್ ಎಕ್ಸ್‌ಪ್ರೆಸ್ ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಕರ ನಡುವೆ ಗಲಾಟೆ ಉಂಟಾಗಿದೆ. ಈ ಗಲಾಟೆ ತಾರಕಕ್ಕೇರಿದ್ದು, ಈ ವೇಳೆ ಒಂದು ಗುಂಪು ಓರ್ವ ಪ್ರಯಾಣಿಕನಿಗೆ ಮನಬಂದಂತೆ ಥಳಿಸಿದ್ದಾರೆ. ಈ ವೇಳೆ ಇದನ್ನು ಕಂಡ ಚಕ್ರಧರಪುರದಿಂದ ಝಾರ್ಸುಗುಡಕ್ಕೆ ಹೋಗುತ್ತಿದ್ದ ಭರ್ನಿಯಾ ಗ್ರಾಮದ ನಿವಾಸಿ ದುಲು ಸರ್ದಾರ್ ಎಂಬವರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ದುಲು ಸರ್ದಾರ್ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ :ಅಸ್ಸೋಂ ನಾಗಾಲ್ಯಾಂಡ್ ಗಡಿಯಲ್ಲಿ 20 ಕೋಟಿ ಮೌಲ್ಯದ ಹೆರಾಯಿನ್ ವಶ
ರೈಲು ಗುದ್ದಿ ಓರ್ವ ಸಾವು :ಬಳಿಕ ಆಕ್ರೋಶಗೊಂಡ ದುಷ್ಕರ್ಮಿಗಳ ತಂಡ ಮೊದಲು ದುಲು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಇಬ್ಬರನ್ನು ಈ ದುಷ್ಕರ್ಮಿಗಳ ಗುಂಪು ಚಲಿಸುತ್ತಿದ್ದ ರೈಲಿನಿಂದ ಹೊರದಬ್ಬಿದೆ. ಈ ವೇಳೆ ದುಲು ಅವರು ಅದೃಷ್ಟವಶಾತ್ ಪಾರಾಗಿದ್ದು, ಮತ್ತೊರ್ವ ವ್ಯಕ್ತಿ ರೈಲು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು, ದುಲು ಅವರನ್ನು ರೈಲು ನಿಧಾನವಾಗಿ ಚಲಿಸುತ್ತಿರುವಾಗ ದುಷ್ಕರ್ಮಿಗಳು ಹೊರದಬ್ಬಿದ್ದು, ರೈಲು ಹಳಿಗಳ ಮೇಲೆ ಹಾಕಿದ್ದ ಜಲ್ಲಿ ಕಲ್ಲಿನ ಮೇಲೆ ಬಿದ್ದಿದ್ದು, ಇದರಿಂದಾಗಿ ತಲೆ ಮತ್ತು ಕೈಗಳಿಗೆ ಗಂಭೀರ ಗಾಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಸೋನುವಾ ಪೊಲೀಸ್ ಠಾಣೆ ಅಧಿಕಾರಿ ಸೋಹನ್‌ಲಾಲ್ ಅವರು, ಘಟನಾ ಸ್ಥಳಕ್ಕೆ ತಕ್ಷಣ ಆಂಬ್ಯುಲೆನ್ಸ್ ಕಳುಹಿಸಿದ್ದಾರೆ. ಗಾಯಗೊಂಡ ದುಲು ಅವರನ್ನು ಚಕ್ರಧರಪುರ ಉಪವಿಭಾಗದ ಆಸ್ಪತ್ರೆಗೆ ಸಾಗಿಸಲಾಗಿದೆ. ಸದ್ಯ ಪರಿಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ನಂತರ ಚಕ್ರಧರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಮತ್ತೊರ್ವ ಪ್ರಯಾಣಿಕನ ಗುರುತು ಇನ್ನೂ ಪತ್ತೆಯಾಗಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು, ಆರೋಪಿಗಳನ್ನು ಪತ್ತೆ ಹಚ್ಚುವ ಹೊತ್ತಿಗಾಗಲೇ ರೈಲು ಟಾಟಾನಗರ ನಿಲ್ದಾಣವನ್ನು ತಲುಪಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ :ಎರಡು ಕುಟುಂಬಗಳ ದುರಂತ ಅಂತ್ಯ: ಐವರು ಮಕ್ಕಳ ಸಮೇತ 9 ಮಂದಿ ಸಾವು