ಶಿವಕಾಶಿ(ತಮಿಳುನಾಡು): ವಿವಿಧ ರಾಜ್ಯಗಳಲ್ಲಿ ಪಟಾಕಿಗಳ ಮೇಲೆ ನಿರ್ಬಂಧ ವಿಧಿಸಿರುವ ಪರಿಣಾಮದಿಂದ ತಮಿಳುನಾಡಿನ ಶಿವಕಾಶಿಯ ಪಟಾಕಿ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ಕನಿಷ್ಠ ಒಂದೂವರೆ ಲಕ್ಷ ಜನ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ನಿಂದ ಪಟಾಕಿ ಮಾರಾಟವಿಲ್ಲದೆ ಕಂಗಾಲಾಗಿದ್ದ ತಯಾರಕರು ಈ ಬಾರಿ ಉತ್ತಮ ವ್ಯಾಪಾರ ನಡೆಸುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅದೀಗ ಮಣ್ಣುಪಾಲಾಗಿದೆ.
ಪಟಾಕಿ ವಲಯವು 7 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದು, ಪ್ರಸ್ತುತ 1,000 ಕ್ಕೂ ಹೆಚ್ಚು ನೋಂದಾಯಿತ ಪಟಾಕಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂಬುದು ಗಮನಾರ್ಹ. 6.5 ಲಕ್ಷಕ್ಕೂ ಹೆಚ್ಚು ಶಿವಕಾಶಿ ಕುಟುಂಬಗಳಿಗೆ ಪಟಾಕಿ ಉದ್ಯಮವು ಅವರ ಏಕೈಕ ಆದಾಯದ ಮೂಲವಾಗಿದೆ.
ಆದರೆ, ಬೇರಿಯಂ ನಿಷೇಧ ಸೇರಿದಂತೆ ಇತ್ತೀಚಿನ ನಿಷೇಧದ ಕ್ರಮಗಳ ನಂತರ 1.5 ಲಕ್ಷಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಗಾರ್ಲ್ಯಾಂಡ್ ಕ್ರ್ಯಾಕರ್ ಅಥವಾ ಪಟಾಕಿ ಸರ ಅತಿ ಹೆಚ್ಚು ಮಾರಾಟವಾಗುವ ವಸ್ತುವಾಗಿದ್ದು, ಅದನ್ನೇ ಈಗ ನಿಷೇಧಿಸಲಾಗಿದೆ. ಪಟಾಕಿ ಸರ ಸಂಪೂರ್ಣವಾಗಿ ಕೈಯಿಂದ ಮಾಡಲ್ಪಡುತ್ತದೆ. ಆದರೆ ಇದರ ಮೇಲಿನ ನಿಷೇಧದಿಂದಾಗಿ ಕಾರ್ಮಿಕರು ಕೆಲಸ ಕಳೆದುಕೊಳ್ಳಲಿದ್ದಾರೆ.
ಸುಮಾರು 40 ಪ್ರತಿಶತದಷ್ಟು ಪಟಾಕಿ ಕಾರ್ಖಾನೆ ನೌಕರರು ಪಟಾಕಿ ಸರ ತಯಾರಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ನಾನು ಕಳೆದ 20 ವರ್ಷಗಳಿಂದ ಪಟಾಕಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಶಿವಕಾಶಿ ಭಾಗದಲ್ಲಿ ಪಟಾಕಿ ಉದ್ಯಮ ಮಾತ್ರ ಉದ್ಯಮವಾಗಿದೆ. ಇಲ್ಲಿ ವಾಸಿಸುವ 5 ಲಕ್ಷ ಜನರ ಏಕೈಕ ಆದಾಯ ಪಟಾಕಿ ಉದ್ಯಮ. ಇಂಥ ಪರಿಸ್ಥಿತಿಯಲ್ಲಿ ನಾವು ಕೃಷಿ ಮಾಡಲು ಸಾಧ್ಯವಿಲ್ಲ. ಪಟಾಕಿ ವ್ಯಾಪಾರದಿಂದ ಮಾತ್ರ ನಾವು ಬದುಕಲು ಸಾಧ್ಯ ಎನ್ನುತ್ತಾರೆ ಪಟಾಕಿ ಕಾರ್ಮಿಕ ನಾಗೇಂದ್ರ.
ಹಲವು ವರ್ಷಗಳಿಂದ ಕೆಲವು ರಾಸಾಯನಿಕಗಳ ಬಳಕೆಗೆ ನಿರ್ಬಂಧ, ಕೆಲ ಸ್ಫೋಟಕಗಳ ತಯಾರಿಕೆಗೆ ನಿಷೇಧದಂತಹ ಸಮಸ್ಯೆಗಳಿಂದ ಪಟಾಕಿ ಉದ್ಯಮವು ನಲುಗುತ್ತಿದೆ. ಜೊತೆಗೆ ಮಳೆಯಿಂದಾಗಿ ಈ ಸಮಯದಲ್ಲಿ ಪಟಾಕಿ ತಯಾರಿಸಲು ಸಾಧ್ಯವಿಲ್ಲ. ಇದರಿಂದಲೂ ಸಾಕಷ್ಟು ಉದ್ಯೋಗ ನಷ್ಟವಾಗಿದೆ. ಅನೇಕ ರಾಜ್ಯಗಳು ದೀಪಾವಳಿಯ ಆಸುಪಾಸಿನಲ್ಲಿ ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ನಿಷೇಧಿಸಿವೆ. ಇದರಿಂದ ನಮ್ಮ ಜೀವನ ಸಂಕಷ್ಟಕ್ಕೀಡಾಗಿದೆ ಎನ್ನುತ್ತಾರೆ ಶಿವಕಾಶಿ ಕಾರ್ಮಿಕರು.
ತಮಿಳುನಾಡು ಮುಖ್ಯಮಂತ್ರಿಗಳು ಪ್ರಧಾನಿ ಮೋದಿಯವರೊಂದಿಗೆ ಸಮಾಲೋಚಿಸಿ ಪಟಾಕಿ ಕಾರ್ಮಿಕರ ಜೀವನೋಪಾಯಕ್ಕೆ ದಾರಿ ಮಾಡಿಕೊಡಬೇಕೆಂದು ಪಟಾಕಿ ಕಾರ್ಮಿಕರ ಪರವಾಗಿ ವಿನಂತಿಸುತ್ತೇನೆ ಎಂದು ಕಾರ್ಮಿಕ ನಾಗೇಂದ್ರ ಹೇಳಿದರು.
ಇದನ್ನೂ ಓದಿ: ದೀಪಾವಳಿ ಪ್ರಯುಕ್ತ ಪಟಾಕಿ ಮಾರಾಟ ಮಳಿಗೆ ತೆರೆಯಲು ಅರ್ಜಿ ಆಹ್ವಾನ