ನವದೆಹಲಿ:ಪಶ್ಚಿಮ ದೆಹಲಿಯಲ್ಲಿ ತಿಲಕ್ ನಗರದಲ್ಲಿ ಶಾಲೆಯೊಂದರ ಬಳಿ ವಿದೇಶಿ ಮಹಿಳೆ ಹತ್ಯೆ ಮಾಡಿ ಶವ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಗುರುಪ್ರೀತ್ ಬಂಧಿತ ಆರೋಪಿ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ವಿವರ: ಶುಕ್ರವಾರ (ನಿನ್ನೆ) ತಿಲಕ್ ನಗರ ಪ್ರದೇಶದಲ್ಲಿ ಸ್ವಿಸ್ ಮಹಿಳೆಯ ಶವವನ್ನು ಪೊಲೀಸರು ಪತ್ತೆ ಮಾಡಿದ್ದರು. ಸರ್ಕಾರಿ ಶಾಲೆಯ ಬಳಿ ಕಪ್ಪು ಪ್ಲಾಸ್ಟಿಕ್ ಚೀಲವೊಂದರಲ್ಲಿ ಕೈ ಕಾಲುಗಳನ್ನು ಸರಪಳಿಯಿಂದ ಕಟ್ಟಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದರು.
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅಪರಿಚಿತ ಕಾರಿನಲ್ಲಿ ಬಂದು ಶವ ಎಸೆದು ಹೋಗಿದ್ದು ಕಂಡು ಬಂದಿತ್ತು. ಕಾರನ್ನು ಕಂಡ ಪೊಲೀಸರು ಅದರ ಸಂಖ್ಯೆಯನ್ನು ಪರಿಶೀಲಿಸಿದಾಗ, ಒಂದು ತಿಂಗಳ ಹಿಂದೆ ಖರೀದಿಸಿದ ಸೆಕೆಂಡ್ ಹ್ಯಾಂಡ್ ಕಾರು ಅದು ಎಂಬುದಾಗಿ ತಿಳಿದುಬಂದಿತ್ತು. ಖರೀದಿದಾರರನ್ನು ಪತ್ತೆ ಹಚ್ಚಲು ಯತ್ನಿಸಿದಾಗ ಗುರುಪ್ರೀತ್ ಎಂಬ ವ್ಯಕ್ತಿ ಕಾರು ಖರೀದಿಸಿರುವುದು ಬೆಳಕಿಗೆ ಬಂದಿತ್ತು. ಇಂದು ಕಾರು ವಶಕ್ಕೆ ಪಡೆದ ಪೊಲೀಸರು ಗುರುಪ್ರೀತ್ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.