ತಿರುವನಂತಪುರಂ (ಕೇರಳ): ಕತಾರ್ನಲ್ಲಿ ಭಾನುವಾರ ನಡೆದ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಅರ್ಜೆಂಟೀನಾ ತಂಡಗಳು ಪ್ರಶಸ್ತಿಗಾಗಿ ಮೈದಾನದಲ್ಲಿ ತೀವ್ರ ಕಾದಾಟ ನಡೆಸುತ್ತಿದ್ದವು. ರೋಚಕ ಹಣಾಹಣಿಯಿಂದ ಕೂಡಿದ್ದ ಪಂದ್ಯವನ್ನು ವೀಕ್ಷಿಸುತ್ತಿದ್ದ ಕೇರಳದ ಅಭಿಮಾನಿಗಳು ಮದ್ಯದ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲೂ ನಿಂತಿದ್ದರು. ಫೈನಲ್ ಪಂದ್ಯದ ಒಂದೇ ದಿನ ಫುಟ್ಬಾಲ್ ಪ್ರಿಯರು ಕೇರಳ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಆದಾಯವನ್ನು ತಂದು ಕೊಟ್ಟಿದ್ದಾರೆ.
ಹೌದು, ಕೇರಳದಲ್ಲಿ ಓಣಂ ಮತ್ತು ವಿಷು ಹಬ್ಬದ ಸಂದರ್ಭದಲ್ಲಿ ದಾಖಲೆ ಮಟ್ಟದಲ್ಲಿ ಮದ್ಯ ಮಾರಾಟವಾಗುತ್ತದೆ. ಫಿಫಾ ವಿಶ್ವಕಪ್ ಫೈನಲ್ ದಿನವೂ ಹಬ್ಬದಂತೆ ದಾಖಲೆಯ ಮದ್ಯ ಮಾರಾಟವಾಗಿದೆ. ಅಂದು ಸಾಮಾನ್ಯ ದಿನಗಳಲ್ಲಿ ಮದ್ಯ ಮಾರಾಟಕ್ಕಿಂತ 17 ಕೋಟಿಯಷ್ಟು ಹೆಚ್ಚಿನ ಮದ್ಯ ಮಾರಾಟವಾಗಿದೆ. ಅಂದೇ ಒಂದೇ ದಿನ ಒಟ್ಟಾರೆ 50 ಕೋಟಿಯ ಮದ್ಯವನ್ನು ಕೇರಳಿಗರು ಖರೀದಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.