ಲೂಧಿಯಾನ (ಪಂಜಾಬ್):ಉದ್ಯಮಿಯೋರ್ವರ ನಿವಾಸದ ಮೇಲೆ ದಾಳಿ ನಡೆಸುವ ಉದ್ದೇಶದಿಂದ ತೆರಳಿದ್ದ ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ ಅಧಿಕಾರಿಗಳ(CGST) ಮೇಲೆ ಹಲ್ಲೆ ನಡೆಸಲಾಗಿದೆ. ಪಂಜಾಬ್ನ ಲೂಧಿಯಾನದಲ್ಲಿ ಈ ಘಟನೆ ನಡೆದಿದ್ದು, ಕೆಲವೊಂದು ವಿಡಿಯೋ ಹೊರಬಿದ್ದಿವೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಲೂಧಿಯಾನದಲ್ಲಿರುವ ಉದ್ಯಮಿಯೋರ್ವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಲು ತೆರಳಿದ್ದರು. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ದಾಳಿ ನಡೆಸಿದ್ದು, ಅಧಿಕಾರಿಗಳ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಸಿಜಿಎಸ್ಟಿ ತಂಡದ ಇನ್ಸ್ಪೆಕ್ಟರ್ ರೋಹಿತ್ ಮೀನಾ ನೀಡಿರುವ ಮಾಹಿತಿ ಪ್ರಕಾರ, ಉದ್ಯಮಿ ಯಶಪಾಲ್ ಮೆಹ್ತಾ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ, ಮೆಹ್ತಾ ಕುಟುಂಬದ ಸದಸ್ಯರು ಹಲ್ಲೆ ನಡೆಸಿದ್ದು, ಕಲ್ಲು ತೂರಾಟ ನಡೆಸಿದ್ದಾರೆಂದು ಆರೋಪಿಸಿದ್ದಾರೆ. ಯಶಪಾಲ್ ಮೆಹ್ತಾ ಅವರ ಸೊಸೆ, ಮಗ, ಮಗಳು ಹಾಗೂ ಇತರೆ ಸಂಬಂಧಿಗಳು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ, ಅಧಿಕಾರಿಗಳನ್ನು ನಿಂದಿಸಿದ್ದಾರೆ. ನಿವಾಸದಿಂದ ಹೊರಬರಲು ಮುಂದಾದ ವೇಳೆ ದಾರಿ ತಡೆದಿರುವ ಘಟನೆ ಸಹ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.