ನವದೆಹಲಿ: 2022ರ ಗುಜರಾತ್ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ (ಎಎಪಿ) ಪ್ರವೇಶದಿಂದ ಗುಜರಾತ್‌ನಲ್ಲಿ ಈಗ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಉಂಟಾಗುತ್ತಿದ್ದ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಸಹ ಸ್ಪರ್ಧೆಗೆ ಇಳಿದಿದೆ. ಆದ್ದರಿಂದ ಇಂತಹ ಕ್ಷೇತ್ರಗಳಲ್ಲಿ ಪ್ರತಿ ಮತವೂ ಮುಖ್ಯ ಎಂಬ ಅಂಶವನ್ನು ಕೇಸರಿ ಪಕ್ಷವು ಎಚ್ಚರಿಕೆಯಿಂದ ಪರಿಗಣಿಸುತ್ತಿದೆ. ಅದೂ ಅಲ್ಲದೆ, ವಿವಿಧ ಅಂಶಗಳ ಕುರಿತು ಬಿಜೆಪಿ ಆಂತರಿಕ ಸಮೀಕ್ಷೆಗಳನ್ನು ನಡೆಸುತ್ತಿದೆ.
ಬಿಜೆಪಿಯ ಆಂತರಿಕ ಸಮೀಕ್ಷೆಯಲ್ಲಿ ಗಂಭೀರ ಅಂಶಗಳು ಬಹಿರಂಗವಾಗಿದೆ. ಆಮ್ ಆದ್ಮಿ ಪಕ್ಷವೇ ಬಿಜೆಪಿಗೆ 19 ಸ್ಥಾನಗಳಲ್ಲಿ ತ್ರೀವ ಪೈಪೋಟಿ ನೀಡಲಿದೆ. ಈ 19 ಕ್ಷೇತ್ರಗಳಲ್ಲಿ ಆಪ್ ಗಣನೀಯ ಸಂಖ್ಯೆಯ ಮತಗಳನ್ನು ಗಳಿಸಿದರೆ, ಅದು ಬಿಜೆಪಿಗೆ ತೀವ್ರ ಹಿನ್ನಡೆ ಉಂಟಾಗಲಿದೆ. ಅಲ್ಲದೇ, ಈ ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಳ್ಳುವ ಸಾಧ್ಯತೆಯೂ ಇದೆ ಎಂದು ಆಂತರಿಕ ಸಮೀಕ್ಷೆ ಬಯಲು ಮಾಡಿದೆ. ಹೀಗಾಗಿ, ಈ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷವನ್ನು ನಿಯಂತ್ರಿಸಲು ಬಿಜೆಪಿ ವರಿಷ್ಠರು ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ನಿರತರಾಗಿದ್ದಾರೆ.
ಇದನ್ನೂ ಓದಿ:ಗುಜರಾತ್ ಚುನಾವಣೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ: ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನ
ಕೇಸರಿ ಪಡೆಯ ಆಂತರಿಕ ಸಮೀಕ್ಷೆಯು ಮುಖ್ಯವಾಗಿ ಮತದಾರರ ಚಿತ್ತವನ್ನು ಅಳೆಯುವ ಗುರಿಯನ್ನು ಹೊಂದಿವೆ ಮತ್ತು ಆಮ್ ಆದ್ಮಿ ಪಕ್ಷ ಆಕ್ರಮಣವನ್ನು ಹೇಗೆ ಎದುರಿಸಬೇಕು ಎಂಬುವುದನ್ನು ಕೇಂದ್ರೀಕರಿಸಿದೆ ಎಂದು ಹೇಳಲಾಗಿದೆ. ಈ ಸಮೀಕ್ಷಾ ವರದಿಯ ವಿಶ್ಲೇಷಣೆ ಪ್ರಕಾರ, ಆಮ್ ಆದ್ಮಿ ಪಕ್ಷವು ಶೇಕಡಾ ಹತ್ತಕ್ಕಿಂತ ಹೆಚ್ಚು ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿಗಳು ಚುನಾವಣೆಯಲ್ಲಿ ದೊಡ್ಡ ಅಂತರದಿಂದ ಸೋಲಬಹುದು ಎಂದು ಎಚ್ಚರಿಸಲಾಗಿದೆ.
ಬಿಜೆಪಿಗೆ ಮತಗಳಿಕೆ ಉಳಿಸಿಕೊಳ್ಳುವ ಸವಾಲು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರಾ ನೇರ ಪೈಪೋಟಿ ಇತ್ತು. ಅದರಲ್ಲೂ, ಬಿಜೆಪಿಗೆ ಕಾಂಗ್ರೆಸ್ ಭಾರಿ ಪೈಪೋಟಿ ನೀಡಿತ್ತು. ಪರಿಣಾಮ ಆಡಳಿತಾರೂಢ ಬಿಜೆಪಿ 99 ಸ್ಥಾನಗಳನ್ನು ಪಡೆದುಕೊಂಡಿದ್ದರೆ, ಕಾಂಗ್ರೆಸ್ 77 ಸ್ಥಾನಗಳಲ್ಲಿ ಗೆಲವು ಸಾಧಿಸಿತ್ತು. ಆದ್ದರಿಂದ ಈಗ ಬಿಜೆಪಿಗೆ ತನ್ನ ಮತಗಳಿಕೆಯನ್ನು ಉಳಿಸಿಕೊಳ್ಳುವ ಸವಾಲು ಎದುರಾಗಿದೆ.