ನವದೆಹಲಿ: ಈರುಳ್ಳಿ ಬೆಲೆ ಮತ್ತೆ ಗಗನಕ್ಕೇರುತ್ತಿದೆ. ರಾಷ್ಟ್ರೀಯ ರಾಜಧಾನಿ ನವದೆಹಲಿಯಲ್ಲಿ ಈರುಳ್ಳಿಯ ಬೆಲೆ 25 ರಿಂದ 50 ಪ್ರತಿಶತದಷ್ಟು ಹೆಚ್ಚಾಗಿದೆ. ಈರುಳ್ಳಿ ಗುಣಮಟ್ಟಕ್ಕೆ ಅನುಗುಣವಾಗಿ ಕೆಜಿಗೆ 60-70 ರೂ.ಗೆ ಮಾರಾಟವಾಗುತ್ತಿದೆ. ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ (ಎನ್‌ಡಿಡಿಬಿ) ಅಂಗಸಂಸ್ಥೆಯಾದ ಮದರ್ ಡೈರಿ ಕೂಡ ತನ್ನ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಬೆಲೆಗಳನ್ನು ಹೆಚ್ಚಿಸಿದೆ.
ಈರುಳ್ಳಿಯ ಬೆಳೆ ಕಡಿಮೆಯಾಗಿದೆ. ಇದರಿಂದಾಗಿ ದರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ದಿನ ಈರುಳ್ಳಿ ದರ ಪ್ರತಿ ಐದು ಕೆಜಿಗೆ 350 ರೂಪಾಯಿಗೆ ತಲುಪಿದೆ. ನಿನ್ನೆ 300 ರೂಪಾಯಿಗೆ ಮಾರಾಟವಾಗುತ್ತಿತ್ತು. ಅದಕ್ಕೂ ಮೊದಲು 280 ರೂ., ವಾರದ ಹಿಂದೆ 200, 160 ರೂ. ಹೀಗೆ ಇತ್ಯಾದಿ ದರಗಳಿದ್ದವು. ಸರಬರಾಜು ಕೊರತೆಯಿಂದ ದರ ಏರಿಕೆಯಾಗ್ತಿದೆ ಎಂದು ಘಾಜಿಪುರದ ತರಕಾರಿ ಮಾರುಕಟ್ಟೆಯ ಈರುಳ್ಳಿ ವ್ಯಾಪಾರಿಯೊಬ್ಬರು ಹೇಳಿದರು.
ಅಕ್ಟೋಬರ್ 26 ರ ಹೊತ್ತಿಗೆ ಈರುಳ್ಳಿಯ ಸರಾಸರಿ ಸಗಟು ಬೆಲೆ ಕ್ವಿಂಟಲ್‌ಗೆ 3,112.6 ರೂ.ಗೆ ತಲುಪಿತ್ತು. ಇದು ಅಕ್ಟೋಬರ್ 1 ರಂದು ಕ್ವಿಂಟಲ್‌ಗೆ 2,506.62 ರೂ.ಗಿಂತ ಹೆಚ್ಚಾಗಿದೆ. ವರದಿಗಳ ಪ್ರಕಾರ, ಕಳೆದ ಎರಡು ವಾರಗಳಲ್ಲಿ ಮಹಾರಾಷ್ಟ್ರದ ಲಾಸಲ್‌ಗಾಂವ್‌ನಲ್ಲಿ ಸಗಟು ದರವು ಸುಮಾರು 60 ಪ್ರತಿಶತದಷ್ಟು ಹೆಚ್ಚಾಗಿದೆ. ದೇಶದ ಹಲವು ಭಾಗಗಳಲ್ಲಿ ಈರುಳ್ಳಿ ಶೇ.50ರಷ್ಟು ಹೆಚ್ಚಾಗಿದ್ದು, ಗ್ರಾಹಕರ ಕೈ ಸುಡುತ್ತಿದೆ.
ಅಹಮದ್‌ನಗರ ಜಿಲ್ಲೆಯ ಈರುಳ್ಳಿ ವರ್ತಕರ ಸಂಘದ ಪ್ರಕಾರ, ಹತ್ತು ದಿನಗಳ ಹಿಂದೆ ಅಹಮದ್‌ನಗರ ಮಾರುಕಟ್ಟೆಯಲ್ಲಿ ಈರುಳ್ಳಿ ಸರಾಸರಿ ಬೆಲೆ ಕೆಜಿಗೆ 35 ರೂ.ನಿಂದ 45 ರೂ.ಗೆ ಏರಿಕೆಯಾಗಿದೆ. ಹೆಚ್ಚುತ್ತಿರುವ ಬೇಡಿಕೆ ಮತ್ತು ಉತ್ಪಾದನೆ ವಿಳಂಬವನ್ನು ಎದುರಿಸಲು ಕೇಂದ್ರ ಸರ್ಕಾರವು ಆಗಸ್ಟ್‌ನಲ್ಲಿ ಈರುಳ್ಳಿ ರಫ್ತಿನ ಮೇಲೆ ಶೇಕಡಾ 40 ರಷ್ಟು ರಫ್ತು ಸುಂಕವನ್ನು ವಿಧಿಸಿತ್ತು. ಇದರ ನಂತರ ಈರುಳ್ಳಿ ಬೆಲೆ ಏರಲು ಪ್ರಾರಂಭಿಸಿದೆ ಎಂದು ಹೇಳುತ್ತಾರೆ.